ಸೌದಿ ಅರೇಬಿಯಾದ ಜೆದ್ದಾಹ್ ನಲ್ಲಿ ಪ್ರಾರಂಭವಾಗಿರುವ ಐಪಿಎಲ್ ಹರಾಜು ಪ್ರಕ್ರಿಯೆ ಹತ್ತು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮೊದಲ ದಿನ ಖರೀದಿಸಿದ ಆರು ಮಂದಿಯಲ್ಲಿ ಒಬ್ಬನೇ ಒಬ್ಬ ಕರ್ನಾಟಕದ ಆಟಗಾರರು ಇಲ್ಲದಿರುವುದು ಕನ್ನಡಿಗರಿಗೆ ನಿರಾಸೆ ಉಂಟು ಮಾಡಿದೆ.
ಹರಾಜು ಪ್ರಕ್ರಿಯೆಗೆ ಮುನ್ನ ಆರ್ ಸಿಬಿಯು ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಖಾತೆಯಲ್ಲಿ 83 ಕೋಟಿ ರೂಪಾಯಿ ಇರಿಸಿಕೊಂಡಿದ್ದ ಫ್ರಾಂಚೈಸಿ ಭಾನುವಾರ ಹರಾಜಿನ ವೇಳೆಗೆ ಆಸ್ಚ್ರೇಲಿಯಾದ ವೇಗಿ ಜೋಶ್ ಹೇಝಲ್ ವುಡ್, ಇಂಗ್ಲೆಂಡಿನ ಆಲ್ ರೌಂಡರ್ ಲಿವಿಂಗ್ ಸ್ಟೋನ್, ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್, ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಸ್ವಿಂಗ್ ಬೌಲರ್ ರಸಿಕ್ ಧರ್, ಲೆಗ್ ಸ್ಪಿನ್ನರ್ ಸುಯೇಶ್ ಶರ್ಮಾ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇನ್ನು ಫ್ರಾಂಚೈಸಿ ಬಳಿ 52.35 ಕೋಟಿ ರೂಪಾಯಿ ಉಳಿದುಕೊಂಡಿದೆ.
ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿ ತೊರೆದಿದ್ದ ಮರಳಿ ಆರ್ ಸಿಬಿ ಸೇರಿಕೊಳ್ಳಬಹುದು ಎಂದು ಎಣಿಸಲಾಗಿತ್ತು. ಆರ್ ಸಿಬಿ ಕೂಡ ಒಂದು ಹಂತದವರೆಗೆ ಹರಾಜಿನಲ್ಲಿ ಕೆಎಲ್ ರಾಹುಲ್ ಅವರಿಗಾಗಿ ಪ್ರಯತ್ನ ನಡೆಸಿತ್ತು. ಆದರೆ ಅಂತಿಮವಾಗಿ ಅವರನ್ನು 14 ಕೋಟಿ ರೂಪಾಯಿಗೆ ದಿಲ್ಲಿ ಖರೀದಿಸಿತು. ಅದೇ ರೀತಿ ಕರ್ನಾಟಕದ ಕರುಣ್ ನಾಯರ್ ಅವರನ್ನು ಸಹ ದಿಲ್ಲಿ ಫ್ರಾಂಚೈಸಿಯು 50 ಲಕ್ಷ ರೂಪಾಯಿಗೆ ಖರೀದಿಸಿತು.
ಕರ್ನಾಟಕದ ಮತ್ತೊಬ್ಬ ಆಟಗಾರರಾಗಿರುವ ವೇಗಿ ಪ್ರಸಿದ್ದ ಕೃನಷ್ಣ ಅವರನ್ನು ಗುಜರಾತ್ ಟೈಟಾನ್ಸ್ 9 ಕೋಟಿ ರೂಪಾಯಿಗೆ ಖರೀದಿಸಿತು. ಗುಜರಾತ್ ಟೈಟನ್ಸ್ ತಂಡದಲ್ಲಿ ಇದ್ದ ರಾಜ್ಯದ ಸವ್ಯಸಾಚಿ ಅಭಿನವ್ ಮನೋಹರ್ ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿಸಿತು. ಹೀಗೆ ಬಹುತೇಕ ಎಲ್ಲ ಆಟಗಾರರು ಬೇರೆ ಬೇರೇ ಫ್ರಾಂಚೈಸಿಗಳ ಪಾಲಾಗಿದ್ದಾರೆ. ಕರ್ನಾಟಕದ ಮತ್ತೊಬ್ಬ ಪ್ರತಿಭಾವಂತ ಪ್ರಸ್ತುತ ಆಸ್ಟ್ರೇಲಿಯಾ ತಂಡದಲ್ಲಿ ಟೆಸ್ಟ್ ಆಡುತ್ತಿರುವ ದೇವದತ್ ಪಡಿಕ್ಕಲ್ ಅವರನ್ನು ಆರ್ ಸಿಬಿ ಸೇರಿದಂತೆ ಯಾವ ಫ್ರಾಂಚೈಸಿಯೂ ಖರೀದಿಸಲು ಮುಂದೆ ಬಾರದ್ದರಿಂದ ಅನ್ ಸೋಲ್ಡ್ ಆಗಿ ಉಳಿದಿದ್ದಾರೆ. ಕರ್ನಾಟಕದ ಮತ್ತೊಬ್ಬ ಆಟಗಾರ ಶ್ರೇಯಸ್ ಗೋಪಾಲ್ ಅವರು ಸಹ ಖರೀದಿಯಾಗಿಲ್ಲ.