ಬೆಂಗಳೂರು: ಸರ್ಕಾರಿ ರಾಂ ನಾರಾಯಣ್ ಚೆಲ್ಲರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದಿಂದ ದೇಶಿಯ ಸಂಸ್ಕೃತಿಯನ್ನು ಬಿಂಬಿಸುವ `ಜನಪದ ಹಬ್ಬ’ ನಡೆಯಿತು.ಜನಪದ ಹಬ್ಬಕ್ಕೆ ನಟಿ ಅನು ಪ್ರಭಾಕರ್, ಜಾನಪದ ಗಾಯಕಿ ಸವಿತಕ್ಕ, ನಟಿ ಶರಣ್ಯ ಶೆಟ್ಟಿ ಚಾಲನೆ ನೀಡಿದರು.
ಜನಪದ ಹಬ್ಬದಲ್ಲಿ ಆರ್ .ಸಿ.ಕಾಲೇಜಿನ ಮೂರು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ದೇಶಿಯ ಸಂಸ್ಕೃತಿ, ಜಾನಪದ ಕಲೆಯನ್ನು ಪ್ರದರ್ಶಿಸಿದರು.
ದೇಶಿಯ ಕ್ರೀಡೆಗಳಾದ ಚಿನ್ನಿ ದಾಂಡು, ಗೋಲಿ ಆಟ, ಮೂರು ಕಾಲು ಆಟ, ನದಿ-ದಡ,ಲಂಗೋರಿ, ಚೌಕಬಾರ, ಕುಂಟಪಿಲ್ಲೆ, ಗೋಣಿ ಚೀಲ ಓಟಗಳನ್ನು ಆಡುವ ಮೂಲಕ ಗ್ರಾಮೀಣ ಆಟೋಟಗಳನ್ನು ಪ್ರದರ್ಶಿಸಿದರು.
ಜಾನಪದ ಕಲೆಗಳಾದ ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ,ಮಲ್ಲಕಂಬ, ಕುಸ್ತಿ ಪ್ರದರ್ಶನ ನೋಡುಗರ ಮನ ಸೆಳೆದವು, ದೇಶಿಯ ಆಹಾರ ಮೇಳ ಎಲ್ಲರ ಗಮನ ಸಳೆಯಿತು, ಸ್ವತ; ವಿದ್ಯಾರ್ಥಿಗಳೇ ತಯಾರಿಸಿದ ರಾಗಿ ಅಂಬಲಿ ಸೇರಿದಂತೆ 45 ದೇಶಿಯ ಆಹಾರಗಳ ಸ್ಟಾಲ್ ಗಳು ವಿದ್ಯಾರ್ಥಿಗಳ ಮನಸೂರೆಗೊಂಡಿತು.
ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳೇ ಸ್ವತ; ಉದ್ಯಮದಲ್ಲಿ ತೊಡಗಿಸಿಕೊಳ್ಳುವ ದೃಷ್ಟಿಯಿಂದ ಈ ಮಳಿಗೆಗಳನ್ನು ತೆರೆಯಲಾಗಿತ್ತು ಎಂದು ಹೇಳಿದರು.ಕನ್ನಡ ವಿಭಾಗದ ಮುಖ್ಯಸ್ಥೆ, ಜನಪದ ಹಬ್ಬದ ಸಂಯೋಜಕಿ ಡಾ.ಪ್ರೇಮಾವತಿ, ಡಾ.ಎಂ.ಎಸ್.ಲೀಲಾ,ಡಾ ಸತೀಶ್ ಹೆಚ್, ಡಾ.ಅನಿತಾ. ಕೆ.ಪಿ . ಡಾ. ಪ್ರಕಾಶ್ ಎಂ ಮತ್ತಿತರು ಭಾಗವಹಿಸಿದ್ದರು.