ದೇವನಹಳ್ಳಿ : ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ನಾಗರೀಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುತ್ತದೆ, ಅದೇ ರೀತಿ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಗ್ರಾಮಗಳ ಯಾವುದೇ ಸಮಸ್ಯೆಗಳಿದ್ದಲ್ಲಿ ಪಂಚಾಯ್ತಿಗೆ ಲಿಖಿತ ದೂರುಗಳನ್ನು ನೀಡಿ ನಾವು ಕ್ರಿಯಾಯೋಜನೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಗ್ರಾ.ಪಂ. ಸದಸ್ಯ ಅತ್ತಿಬೆಲೆ ನರಸಪ್ಪ ತಿಳಿಸಿದರು.
ಅವರು ತಾಲ್ಲೂಕಿನ ಆವತಿ ಗ್ರಾಮ ಪಂಚಾಯ್ತಿಯ 2023-24ನೇ ಸಾಲಿನ ಮೊದಲಹಂತದ ಗ್ರಾಮಸಭೆಯಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅನೇಕ ತೊಂದರೆಗಳಿದ್ದು ಅವುಗಳನ್ನು ಪಿ.ಡಿ.ಓ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರ ಜೊತೆಗೂಡಿ ಇಲ್ಲಿನ ಸಮಸ್ಯೆ ಗಳನ್ನು ಪರಿಹರಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ನ ಗುತ್ತಿಗೆದಾರರು ನೀರಿನ ಸಂಪರ್ಕ ಕಲ್ಪಿಸಲು ಗ್ರಾಮಗಳಲ್ಲಿ ರಸ್ತೆಗಳನ್ನು ಹಾಳು ಮಾಡುತ್ತಿದ್ದು,
ಸರಿಯಾಗಿ ಮುಚ್ಚದೆ ಬಿಟ್ಟು ಹೋಗುತ್ತಿದ್ದಾರೆ, ಇದು ಒಂದು ಗ್ರಾಮದ ಸಮಸ್ಯೆಯಲ್ಲ ಎಲ್ಲಾ ಗ್ರಾಮಗಳಲ್ಲೂ ಈ ಅವ್ಯವಸ್ಥೆ ಮಾಡಿದ್ದಾರೆ ಎಂದು ಉಪಾಧ್ಯಕ್ಷೆ ಸೌಭಾಗ್ಯ ತಿಳಿಸಿದರು, ಇದಕ್ಕೆ ಜಲಜೀವನ್ ಮಿಷನ್ನ ಈ ಭಾಗದ ಇಂಜಿನಿಯರ್ ಜಗದೀಶ್ ಉತ್ತರ ನೀಡಿ ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದರು,
ಬೆಸ್ಕಾಂನ ಸಮಸ್ಯೆ, ಶಿಕ್ಷಣ ಇಲಾಖೆಯ ಬಗ್ಗೆ ಕೆಲವರು ಮಾತನಾಡಿ ಸರಿಯಾಗಿ ಪಾಠ ಮಾಡಿ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರೆ ಮುಖ್ಯ ಶಿಕ್ಷಕ ನಿಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದರು.ಗ್ರಾಮದ ಮುಖಂಡ ತಿಮ್ಮರಾಯಪ್ಪ ಗ್ರಾಮಗಳ ಹಲವಾರು ಸಮಸ್ಯೆಗಳನ್ನು ವಿವರ ವಾಗಿ ತಿಳಿಸಿ ಬಗೆಹರಿಸುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮದ ಯುವಕ ಚಂದ್ರು ಮಾತನಾಡಿ ಗ್ರಾಮದ ಯುವಕರು ಹಾಗೂ ವಿದ್ಯಾರ್ಥಿಗಳು ಆಟದ ಮೈದಾನವಿಲ್ಲ, ಹತ್ತು ಆಸ್ಪತ್ರೆ ನಿರ್ಮಿಸುವ ಬದಲು ಒಂದು ಆಟದ ಮೈದಾನವಿದ್ದರೆ ಕೆಲವು ರೋಗಗಳಿಂದ ದೂರವಿರಬಹುದು ಆದ್ದರಿಂದ ತ್ವರಿತವಾಗಿ ಆಟದ ಮೈದಾನ ಮಾಡಿಸಬೇಕು ಎಂದು ಮನವಿ ಮಾಡಿದರು..
ಕಂದಾಯ ಇಲಾಖೆಯ ಉಪೇಂದ್ರ, ಶಿಕ್ಷಣ ಇಲಾಖೆಯ ಜಯಂತಿ, ಗ್ರಾ.ಪಂ. ಪಿಡಿ.ಓ ಎಸ್.ಎಂ.ಡಿ. ಇಸಾಕ್, ಅಧ್ಯಕ್ಷೆ ಮುನಿರತ್ನಮ್ಮ ಮುನಿರಾಜು, ಉಪಾಧ್ಯಕ್ಷೆ ಸೌಭಾಗ್ಯ ಮುನಿತಿಮ್ಮರಾಯಪ್ಪ, ಎಂ. ಪ್ರೇಮ ಎಂ.ನಾಗರಾಜ್, ಭವ್ಯ ಸತೀಶ್ಬಾಬು, ಎನ್.ಉಮೇಶ್, ನಾಗವೇಣಿ ನರಸಿಂಹಮೂರ್ತಿ, ಕೆ. ನಾರಾಯಣಸ್ವಾಮಿ, ಎಂ. ವಿಶ್ವನಾಥ್, ಟಿ.ಮಾಲಾ ಆಂಜಿನಪ್ಪ, ಪ್ರಮೀಳಾ ಜಿ.ರಾಮಚಂದ್ರ, ನರಸಿಂಹಮೂರ್ತಿ ಗೋಪಾಲಕೃಷ್ಣ, ಎಂ. ಪ್ರೇಮ ಎಂ. ನಾಗರಾಜ್, ಟಿ.ಕೆ. ಭವ್ಯ ಹಾಜರಿದ್ದರು.