ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ ತಂಡದ ಪರ ಈಗಾಗಲೇ ಅತೀ ಹೆಚ್ಚು ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ 19.5 ಸರಾಸರಿಯನ್ನು ಹೊಂದಿದ್ದಾರೆ. ಮಾಲ್ಕಮ್ ಮಾರ್ಷಲ್ (20.9), ಜೋಯಲ್ ಗಾರ್ನರ್ (21.0) ಮತ್ತು ಕರ್ಟ್ಟಿ ಆಂಬೋಸ್ (21.0) ಅವರಂತಹ ಸಾರ್ವಕಾಲಿಕ ಶ್ರೇಷ್ಠರನ್ನು ಹಿಂದಿಕ್ಕಿ 200 ವಿಕೆಟ್ ಕ್ಲಬ್ ಸೇರಿದರು. ಇದೀಗ ಬುಮ್ರಾ 20ಕ್ಕಿಂತ ಕಡಿಮೆ ಸರಾಸರಿ ಕಾಯ್ದುಕೊಂಡು ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜತೆಗೆ ಜಸ್ಪ್ರೀತ್ ಬುಮ್ರಾ ಟೆಸ್ಟ್ನಲ್ಲಿ ವೇಗವಾಗಿ 200 ವಿಕೆಟ್ಗಳನ್ನು ಕಬಳಿಸಿದ ಎರಡನೇ ಭಾರತೀಯ ಬೌಲರ್ ಎಂಬ ಸಾಧನೆಯನ್ನೂ ಮಾಡಿದರು. ಮೊದಲ ಬೌಲರ್ ಆಲ್ರೌಂಡರ್ ರವೀಂದ್ರ ಜಡೇಜಾ ಆಗಿದ್ದಾರೆ. ಬುಮ್ರಾ ಮತ್ತು ಜಡೇಜಾ ಇಬ್ಬರೂ ತಮ್ಮ 44 ನೇ ಟೆಸ್ಟ್ನಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.ಸರಣಿಯಲ್ಲಿ ಬುಮ್ರಾ ತೆಕ್ಕೆಗೆ 28 ವಿಕೆಟ್!: ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಮಿಂಚುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಆಸೀಸ್ ಬ್ಯಾಟರ್ಗಳಿಗೆ ದೊಡ್ಡ ತಲೆನೋವಾಗಿದ್ದಾರೆ.
ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್, ಅಡಿಲೇಡ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 4 ವಿಕೆಟ್, ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ್ದಾರೆ. ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈಗಾಗಲೇ 8 ವಿಕೆಟ್ ಉರುಳಿಸಿದ್ದಾರೆ.ಬ್ರಿಸ್ಬೇನ್ನಲ್ಲಿ ಡ್ರಾನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್ನಲ್ಲಿ 94ಕ್ಕೆ 9 ವಿಕೆಟ್ ಪಡೆದ ಬುಮ್ರಾ, ತ್ವರಿತವಾಗಿ 14 ರೇಟಿಂಗ್ ಪಾಯಿಂಟ್ಸ್ ಗಿಟ್ಟಿಸಿದ್ದರು. ಈ ಮೂಲಕ ಐಸಿಸಿ ರಾರಯಂಕಿಂಗ್ನಲ್ಲಿ ಗರಿಷ್ಠ 904 ರೇಟಿಂಗ್ ಅಂಕಗಳನ್ನು ಹೊಂದಿದ್ದ ಅಶ್ವಿನ್ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ. ಇದು ಮಾತ್ರವಲ್ಲದೆ, ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.