ಬುಮ್ರಾ ನಿಜಕ್ಕೂ ಬಾರ್ಡರ್- ಗವಾಸ್ಕರ್ ಟ್ರೋಫಿ ಆಡಲು ಆಸ್ಟ್ರೇಲಿಯಾ ತೆರಳುತ್ತಿದ್ದಾರಾ? ಈ ಬಗ್ಗೆ ಗಳಿಗೆಗೊಂದು ವರದಿಗಳು ಬರುತ್ತಿವೆ. ಯಾವುದನ್ನು ನಂಬೋದು, ಯಾವುದನ್ನು ಬಿಡೋದು ಎಂಬ ಪ್ರಶ್ನೆ ಉದ್ಭವಿಸಿದೆ. ತಾನು ಸಿದ್ಧವಾಗುತ್ತಿರುವ ಬಗ್ಗೆ ರಣಜಿ ಆಡುತ್ತಿರುವ ಶಮಿ ಅವರೇ ಸೂಚ್ಯವಾಗಿ ತಿಳಿಸಿದ್ದರೂ ಆವರು ಆಸ್ಟ್ರೇಲಿಯಾ ತಲುಪಿದ ಬಳಿಕವೇ ಎಲ್ಲ ಖಾತ್ರಿ ಎಂದೇ ಹೇಳಲಾಗುತ್ತಿದೆ.
ಇದೀಗ ಪರ್ತ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಮೊಹಮ್ಮದ್ ಶಮಿ ಅವರ ಬಗ್ಗೆ ಆಶಾವಾದದ ಮಾತುಗಳನ್ನು ಹೇಳಿದ್ದಾರೆ. ಶಮಿ ಅವರು ಈ ಟೆಸ್ಟ್ ಸರಣಿಯ ವೇಳೆಗೇ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಆದರೆ ಎಷ್ಟನೇ ಟೆಸ್ಟ್ ಪಂದ್ಯಕ್ಕೆ ಲಭ್ಯ ಎಂಬ ಪ್ರಶ್ನೆಗೆ, ಅದು ಅವರು ಎಷ್ಟರ ಮಟ್ಟಿಗೆ ಸುಧಾರಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ ಎಂದಿದ್ದಾರೆ.
ಮೊದಲ ಟೆಸ್ಟ್ ಗೆ ಪೂರ್ವಭಾವಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, “ಶಮಿ ಅವರು ಮತ್ತೆ ಕ್ರಿಕೆಟ್ ಆಡಲು ಶುರು ಮಾಡಿದ್ದಾರೆ. ಖಂಡಿತವಾಗಿಯೂ ಅವರು ತಂಡದ ಆಂತರಿಕ ಭಾಗವಾಗಿದ್ದಾರೆ. ತಂಡದ ಮ್ಯಾನೇಜ್ ಮೆಂಟ್ ಸಹ ಅವರ ಕಡೆ ಒಂದು ಕಣ್ಣಿಟ್ಟಿದೆ ಎಂದು ನಾನು ಅಂದುಕೊಂಡಿದ್ದೇನೆ. ಸಕಲ ಸಂಗತಿಗಳೂ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ ಎಂಬುದು ನನ್ನ ನಂಬಿಕೆಯಾಗಿದೆ. ಅದೇ ರೀತಿ ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಅವರು ಇಲ್ಲಿರುವುದ್ನು ನೀವು ನೋಡುತ್ತೀರಿ ಎಂದು ಸಾಧ್ಯತೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.
ಇನ್ನು ಭಾರತ ತಂಡದ ಬೌಲಿಂಗ್ ಕೋಚ್ ಆಗಿರುವ ಮಾರ್ನೆ ಮಾರ್ಕೆಲ್ ಅವರು ಇತ್ತೀಚೆಗೆ ನ್ಯೂಜಿಲೆಂಡ್ ಸರಣಿ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆಯುತ್ತಿದ್ದ ಶಮಿ ಅವರನ್ನು ಹತ್ತಿರದಿಂದ ವೀಕ್ಷಿಸಿದ್ದರು. ಜೊತೆಗೆ ಅವರ ಪ್ರಗತಿಯನ್ನು ತಂಡದ ಮ್ಯಾನೇಜ್ ಮೆಂಟ್ ಹತ್ತಿರದಿಂದ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.