ಬೆಂಗಳೂರು: ರಾಮನಗರದ ದಯಾನಂದ ಸಾಗರ ಆಸ್ಪತ್ರೆಯ ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಇಬ್ಬರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಅಮೃತಾ ಕುಮಾರಿ (20) ಮತ್ತು ಸುರೇಂದ್ರ ಮೆಹ್ರಾ (21) ಬಂಧಿತ ಆರೋಪಿಗಳು. ತನಿಖೆಯ ಆರಂಭದಲ್ಲಿ ಆರೋಪಿಗಳು ಇಬ್ಬರೂ ವಿವಾಹಿತರು ಎಂದು ಹೇಳಿಕೊಂಡಿದ್ದರು. ನಂತರ ಇಬ್ಬರೂ ಅವಿವಾಹಿತರು ಎಂದು ತಿಳಿದುಬಂದಿದ್ದು, ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸವಿದ್ದರು ಎಂದು ತಿಳಿದುಬಂದಿದೆ.
ಅಮೃತ ಮತ್ತು ಸುರೇಂದ್ರ ಇಬ್ಬರೂ ಹಾರೋಹಳ್ಳಿಯ ಕಾರ್ಖಾನೆಯೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ವಿಚಾರಣೆ ವೇಳೆ ಯುವತಿ ಗರ್ಭಾವಸ್ಥೆಯಲ್ಲಿದ್ದಾಗಲೇ ಸಮಸ್ಯೆಗಳಾಗಿತ್ತು. ತೀವ್ರ ಹೆರಿಗೆ ನೋವು ಹಾಗೂ ಅತೀವ್ರ ರಕ್ತಸ್ರಾವವಾಗುತ್ತಿತ್ತು. ಹೊಟ್ಟೆಯಲ್ಲಿದ್ದಾಗಲೇ ಮಗು ಸತ್ತು ಹೋಗಿತ್ತು. ಮಗುವನ್ನ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾಳೆ.
ನ.24ರಂದು ದಯಾನಂದ ಸಾಗರ ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ಆಗ ತಾನೆ ಹುಟ್ಟಿದ ಮಗುವನ್ನ ಟಾಯ್ಲೆಟ್ ಕಮೋಡ್ಗೆ ಹಾಕಿ ಆರೋಪಿಗಳು ಫ್ಲಶ್ ಮಾಡಿದ್ದರು. ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಶೌಚಾಲಯ ಬ್ಲಾಕ್ ಆಗಿದ್ದ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚಗುಂಡಿಯಲ್ಲಿ ಮಗು ಪತ್ತೆಯಾಗಿತ್ತು. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಗೆ ದಯಾನಂದ ಸಾಗರ ಆಸ್ಪತ್ರೆ ವೈದ್ಯರು ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿದೆ.