ದೊಡ್ಡಬಳ್ಳಾಪುರ: ತಾಲ್ಲೂಕಿನ ಜನತೆಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಗಸ್ಟ್ 15 ರಂದು ಬ್ರಹ್ಮಶ್ರೀ ಪತ್ರೀಜಿ ರವರ ಮಾರ್ಗದರ್ಶನದೊಂದಿಗೆ ದೊಡ್ಡಬಳ್ಳಾಪುರ ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಂದಿರದ ಮುಖ್ಯಸ್ಥ ಬಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.
ನಗರದ ಧ್ಯಾನ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಸಾಮಾನ್ಯ ಜನತೆ ಹಲವಾರು ತೊಂದರೆಗಳಿಂದ ಬಳಲುತ್ತಿದ್ದಾರೆ. ಸರ್ವ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುವ ಪಿರಮಿಡ್ ಧ್ಯಾನದ ತರಬೇತಿಯನ್ನು ಉಚಿತವಾಗಿ ನಮ್ಮ ಧ್ಯಾನ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದು. ಆಗಸ್ಟ್ 15ರಂದು ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದರು.
ಕಾರ್ಯಕ್ರಮದಲ್ಲಿ 4000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಸಕಲ ಸಿದ್ಧತೆ ನಡೆದಿದೆ. ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಆಸಕ್ತರಿಗೆ ಉಚಿತವಾಗಿ
ಪಿರಮಿಡ್ ಧ್ಯಾನವನ್ನು ಮುಖ್ಯ ತರಬೇತುದಾರರಾದ ಅಯ್ಯಪ್ಪ ಪಿಂಡಿ ರವರ ನೇತೃತ್ವದಲ್ಲಿ ಆಯೋಜನೆ ಮಾಡಿದ್ದುತಾಲೂಕಿನ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಖ್ಯ ತರಬೇತುದಾರ ಅಯ್ಯಪ್ಪ ಪಿಂಡಿ ಮಾತನಾಡಿ ಅತ್ಯಂತ ಪ್ರಭಾವಶಾಲಿಯಾದ ಪಿರಮಿಡ್ ಧ್ಯಾನವು ಸರ್ವರಿಗೂ ಲಭಿಸಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಇದು ಮೂರನೇ ಧ್ಯಾನ ಮಂದಿರವಾಗಿದ್ದು ನಾದ ಧ್ಯಾನ ಯಜ್ಞ ವಿಶೇಷವಾಗಿರುತ್ತದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಧ್ಯಾನದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ನಿತ್ಯ ಧ್ಯಾನ ಮಾಡುವ ಮೂಲಕ ಆರೋಗ್ಯ ಸಮಸ್ಯೆ ಹಾಗೂ ಮಾನಸಿಕ ತೊಂದರೆಗಳಿಂದ ದೂರವಿರಬಹುದಾಗಿದೆ. ಕಲುಷಿತ ವಾತಾವರಣದಲ್ಲಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಆಗುವ ದುಷ್ಪರಿಣಾಮಗಳಿಂದ ದೂರವಿರಲು ಧ್ಯಾನ ಅತ್ಯುತ್ತಮ ಮಾರ್ಗವಾಗಿದೆ. ಸರ್ವರೂ ಈ ಮಾರ್ಗವನ್ನು ಅನುಸರಿಸುವಂತೆ ಮನವಿ ಮಾಡಿದರು.
ಧ್ಯಾನ ಮಂದಿರದ ಸಿಬ್ಬಂದಿ ಉಮೇಶಯ್ಯ ಮಾತನಾಡಿಧ್ಯಾನಕ್ಕೆ ಬರುವ ಪ್ರತಿ ಸಾರ್ವಜನಿಕರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದ್ದು ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿದೆ. ತುಮಕೂರು ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಪಿರಮಿಡ್ ಧ್ಯಾನದ ಲಾಭಗಳನ್ನು ಸಾರ್ವಜನಿಕರು ಪಡೆದಿದ್ದು. ತಾಲೂಕಿನ ಜನತೆಯ ಉಪಯೋಗಕ್ಕಾಗಿ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ನಿರಂತರಧ್ಯಾನ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗರಾಜು, ಎಲ್. ಕೆ.ನಂದ ಕುಮಾರ್, ಆರ್ ಶ್ರೀನಿವಾಸ್, ಲಿಂಗರಾಜು, ಅರುಣ್ ಕುಮಾರ್, ಹೆಚ್. ಬಿ.ದೊಡ್ಡ ರಂಗಪ್ಪ, ಎ ಚಿತ್ರ ಶ್ರೀ, ಎನ್. ಸವಿತಾ ಸೇರಿದಂತೆ ಹಲವರು ಉಪಸಿತರಿದ್ದರು.