ದಿಲ್ಲಿ ಕ್ಯಾಪಿಟಲ್ಸ್ ಪರ ಈ ವರ್ಷವೂ ಆಡಲು ಸಾಧ್ಯವಿಲ್ಲ ಎಂದು ಈಗಾಗಲೇ ಘೋಷಿಸಿರುವ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು ನಿಯಮಗಳಿಗನುಸಾರವಾಗಿ 2 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ನಿಷೇಧಿಸಲಾಗಿದೆ.
2025ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದರಿಂದ ದಿಲ್ಲಿ ಕ್ಯಾಪಿಟಲ್ಸ್ ತಂಡವೇ ಅವರ ಬಗ್ಗೆ ಮತ್ತೆ ಆಸಕ್ತಿ ವಹಿಸಿ 6.25 ಕೋಟಿ ರೂಗೆ ಖರೀದಿಸಿತ್ತು. ಆದರೆ ಅವರು ಈ ಬಾರಿಯೂ ಆಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಐಪಿಎಲ್ ನಿಯಮಾವಳಿಯ ಪ್ರಕಾರ ನೋಂದಾಯಿತ ಆಟಗಾರನೊಬ್ಬ ಗಾಯ ಅಥವಾ ಮತ್ತಾವುದೇ ಅನಿವಾರ್ಯ ಕಾರಣಗಳಿಗಾಗಿ ಐಪಿಎಲ್ ನಿಂದ ದೂರ ಉಳಿದರೆ ಅದಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಆದರೆ ಸುಮ್ಮನೇ ಅನ್ಯ ಕಾರಣಗಳನ್ನು ನೀಡಿದರೆ 2 ವರ್ಷಗಳ ನಿಷೇಧವನ್ನು ಹೇರಬಹುದು.