ಕೋಲ್ಕತ್ತಾ: ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ, ಅತಿಥೇಯ ಭಾರತ ತಂಡವು ಗೆಲುವಿನ ನಗೆ ಬೀರಿದೆ.ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ, 20 ಓವರ್ಗಳಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 132 ರನ್ಗಳಿಗೆ ಕಟ್ಟಿ ಹಾಕಿತು. ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು, ಕೇವಲ 12.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದ ಭಾರತದ ಬೌಲರ್ ಅರ್ಷದೀಪ್ ಸಿಂಗ್, ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಗಮನ ಸೆಳೆದರು. ಅದೇ ರೀತಿ ಮತ್ತೋರ್ವ ಆರಂಭಿಕ ಬ್ಯಾಟ್ಸಮನ್ ಬೆನ್ ಡಕೆಟ್ ಅವರನ್ನು ಕೇವಲ 4 ರನ್ಗಳಿಗೆ ಔಟ್ ಮಾಡಿ ಅರ್ಷದೀಪ್ ಸಿಂಗ್ ಇಂಗ್ಲೆಂಡ್ ತಂಡದ ದೊಡ್ಡ ಮೊತ್ತ ಪೇರಿಸುವ ಆಸೆಗೆ ತಣ್ಣೀರು ಎರಚಿದರು.
ಇಂಗ್ಲೆಂಡ್ ತಂಡದ ಪರವಾಗಿ ಜಸ್ ಬಟ್ಲರ್ 68 ರನ್ ಗಳಿಸಿ ಗಮನ ಸೆಳೆದರು. ಒಟ್ಟು 44 ಎಸೆತಗಳನ್ನು ಎದುರಿಸಿದ ಜಾಸ್ ಬಟ್ಲರ್, 8 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ ಅಂತಿಮವಾಗಿ ವರುಣ್ ಚಕ್ರವತ್ರಿ ಅವರ ಬೌಲಿಂಗ್ನಲ್ಲಿ ನಿತೀಶ್ ರೆಡ್ಡಿ ಅವರಿಗೆ ಕ್ಯಾಚಿತ್ತು ಪೆವಿಲಿಯನ್ಗೆ ಮರಳಿದರು.ಇನ್ನುಳಿದಂತೆ ಇಂಗ್ಲೆಂಡ್ ತಂಡದ ಪರವಾಗಿ ಹ್ಯಾರಿ ಬ್ರೂಕ್ ಮತ್ತು ಜಾಫ್ರಾ ಆರ್ಚರ್ ಕ್ರಮವಾಗಿ 17 ಮತ್ತು 12 ರನ್ ಗಳಿಸಿದರು. ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಇಂಗ್ಲೆಂಡ್ ತಂಡದ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.ಭಾರತದ ಬೌಲರ್ಗಳ ಪೈಕಿ ಅರ್ಷದೀಪ್ ಸಿಂಗ್ 2, ವರುಣ್ ಚಕ್ರವರ್ತಿ 3, ಹಾರ್ದಿಕ್ ಪಾಂಡ್ಯಾ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.