ಮುಂಬಯಿ: ಇಲ್ಲಿನ ಐತಿಹಾಸಿಕ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ vs ಇಂಗ್ಲೆಂಡ್ 5ನೇ ಟಿ-20 ಪಂದ್ಯದಲ್ಲಿ, ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅತಿಥೇಯ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತವು 4-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.
ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್, ತನ್ನ ನಿರ್ಧಾರಕ್ಕೆ ಪಶ್ಚಾತಾಪ ಪಡಬೇಕಾದ ಪರಿಸ್ಥಿತಿಯನ್ನು ಭಾರತದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ನಿರ್ಮಿಸಿದರು. ಕೇವಲ 54 ಎಸೆತಗಳಲ್ಲಿ ಭರ್ಜರಿ 135 ರನ್ಗಳಿಸಿದ ಅಭಿಷೇಕ ಶರ್ಮಾ, 7 ಬೌಂಡರಿ ಮತ್ತು 13 ಸಿಕ್ಸರ್ ಸಿಡಿಸಿ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು.
ಅಭಿಷೇಕ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು.
ಆದರೆ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ನಾಯಕ ಸೂರ್ಯಕುಮಾರ್ ಯಾದವ್(2) ಮತ್ತು ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್(16) ಈ ಬಾರಿಯೂ ನಿರಾಶೆ ಮೂಡಿಸಿದರು.ಇಂಗ್ಲೆಂಡ್ ತಂಡದ ಪರವಾಗಿ ಫಿಲ್ ಸಾಲ್ಟ್(55) ಉತ್ತಮ ಪ್ರದರ್ಶನ ತೋರಿದರೂ, ಅಂತಿಮವಾಗಿ ಭಾರತೀಯ ಬೌಲರ್ಗಳ ಎದುರಿಗೆ ಇತರ ಇಂಗ್ಲೆಂಡ್ ಬ್ಯಾಟ್ಸಮನ್ಗಳು ಮಂಡಿಯೂರಿದರು.
ಭಾರತದ ಬೌಲರ್ಗಳ ಪೈಕಿ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರೆ, ಅಭಿಷೇಕ್ ಶರ್ಮಾ, ಶಿವಂ ದುಬೆ, ವರುಣ್ ಚರ್ಕವರ್ತಿ ತಲಾ 2 ವಿಕೆಟ್ ಪಡೆದರು. ಅದೇ ರೀತಿ ರವಿ ಬಿಷ್ಣೋಯಿ 1 ವಿಕೆಟ್ ಪಡೆದರು. ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಅಭಿಷೇಕ್ ಶರ್ಮಾ ಬೌಲಿಂಗ್ನಲ್ಲೂ ಮಿಂಚಿದ್ದು, ಗಮನ ಸೆಳೆಯಿತು.