ನವದೆಹಲಿ: ಕಠಿಣ ಕ್ರಮದ ಸರ್ಕಾರದ ಎಚ್ಚರಿಕೆ ನಡುವೆಯೂ ದೇಶದ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನಗಳಿಗೆ ಬಾಂಬ್ ಬೆದರಿಕೆ ಮುಂದುವರೆದಿದೆ. ಗುರುವಾರ ಬೆಳಗ್ಗೆ ನಾಗ್ಪುರ- ಕೋಲ್ಕತ್ತಾ ಮಾರ್ಗದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಹೌದು. 187 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯೊಂದಿಗೆ ನಾಗ್ಪುರದಿಂದ ಕೋಲ್ಕತ್ತಾಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದ ನಂತರ ರಾಯಪುರ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡಿಂಗ್ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು ಎಂದು ರಾಯಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.ಛತ್ತೀಸ್ಗಢದ ರಾಜಧಾನಿ ರಾಯಪುರ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ವಿಮಾನವನ್ನು ಲ್ಯಾಡಿಂಗ್ ಮಾಡಲಾಯಿತು. ನಂತರ ಕಡ್ಡಾಯ ಭದ್ರತಾ ತಪಾಸಣೆಗಾಗಿ ಬೇರೆ ಕಡೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ತಾಂತ್ರಿಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರೀಯ ದಳದಿಂದ ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು ಎಂದು ಅವರು ಹೇಳಿದರು.