ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಇಂದಿನಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿಯುತ್ತಿರುವ ಮಳೆ ಪಂದ್ಯಕ್ಕೆ ಅವಕಾಶ ಕೊಡುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇಂದು ಬೆಳಗ್ಗೆ 9:30 ಕ್ಕೆ ಮ್ಯಾಚ್ ಆರಂಭವಾಗಬೇಕಿತ್ತು. ಆದರೆ, ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ ನಗರದಲ್ಲಿ ಮಳೆ ಸುರಿಯುತ್ತಿದ್ದು, ಇಂದು ಕೂಡ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.ಮೊದಲ ಟೆಸ್ಟ್ನ ಮುನ್ನಾದಿನ ಅಂದರೆ ಮಂಗಳವಾರ ಬೆಂಗಳೂರಲ್ಲಿ ಭಾರೀ ಮಳೆಯು ಮುಂದುವರೆಯಿತು. ಇದರಿಂದಾಗಿ ಭಾರತವು ತನ್ನ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಿತ್ತು. ಹವಾಮಾನ ವರದಿಗಳ ಪ್ರಕಾರ, ಮೋಡ ಕವಿದ ಆಕಾಶ ಮತ್ತು ಮಳೆಯು ದಿನವಿಡೀ ಆಗುವ ಸಾಧ್ಯತೆ ಇದೆ.
ಇದು ಟೆಸ್ಟ್ ಸರಣಿಯ ಮೊದಲ ದಿನದ ಮೇಲೆ ಪರಿಣಾಮ ಬೀರಬಹುದು.ಚಿನ್ನಸ್ವಾಮಿ ಕ್ರೀಡಾಂಗಣವು ಉತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದನ್ನು ದೇಶದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಸಬ್ಏರ್ ವ್ಯವಸ್ಥೆಯು ಮಳೆ ನಿಂತ ಬಳಿಕ ಕೇವಲ 15 ನಿಮಿಷಗಳ ನಂತರ ಆಟಕ್ಕೆ ಮೈದಾನವನ್ನು ಸಿದ್ಧಪಡಿಸುತ್ತದೆ.
ಇದುವರೆಗೆ ಭಾರತ ಮತ್ತು ನ್ಯೂಜಿಲೆಂಡ್ 62 ಪಂದ್ಯಗಳನ್ನು ಆಡಿವೆ. ಅದರಲ್ಲಿ ಭಾರತವು 22 ಹಾಗೂ ನ್ಯೂಜಿಲೆಂಡ್ 13 ಪಂದ್ಯಗಳಲ್ಲಿ ಜಯಗಳಿಸಿವೆ. 27 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.