ವಡೋದರಾ: ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜಯಂಟ್ಸ್ ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.
ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ.ಜಾಗತಿಕ ಸೂಪರ್ ಸ್ಟಾರ್ಗಳು ಸ್ಪರ್ಧೆಗೆ ಅಪಾರ ಮೌಲ್ಯವನ್ನು ತಂದಿದ್ದರೂ ಲೀಗ್ನ ನಿಜವಾದ ಯಶಸ್ಸು ದೇಶೀಯ ಆಟಗಾರ್ತಿಯರ ಏಳಿಗೆಯಲ್ಲಿಡಗಿದೆ. ಮೊದಲ ಎರಡು ಋತುಗಳಲ್ಲಿ ಶ್ರೇಯಂಕಾ ಪಾಟೀಲ್ ಮತ್ತು ಸೈಕಾ ಇಶಾಕ್ ಅವರಂತಹ ಹಲವಾರು ದೇಶೀಯ ಪ್ರತಿಭೆಗಳು ಹೊರಹೊಮ್ಮಿದ್ದು, ರಾಷ್ಟ್ರೀಯ ತಂಡದಿಂದಲೂ ಕರೆ ಸ್ವೀಕರಿಸಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಮತ್ತು ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಪ್ರದರ್ಶನ ನೀಡಲು ಅವರು ಉತ್ಸುಕರಾಗಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದ ವೇಗದ ಬೌಲಿಂಗ್ ಆಲ್ರೌಂಡರ್ ಕಾಶ್ವೀ ಗೌತಮ್ ಸಹ ಅತ್ಯುತ್ತಮ ಆಟಗಾರ್ತಿಯರ ವಿರುದ್ಧ ತಮ್ಮನ್ನು ಸಾಬೀತುಪಡಿಸುವ ಅವಕಾಶವನ್ನು ಹೊಂದಿದ್ದಾರೆ. ಟೂರ್ನಿಯಲ್ಲಿ ಮೊದಲ ಬಾರಿಗೆ ವಡೋದರಾ ಮತ್ತು ಲಖನೌ ತಾಣಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.