ಬೆಂಗಳೂರು: ಭಾರತದಲ್ಲಿ ಮಹಿಳೆಯರು ಬಯಸಿದ್ದನ್ನು ಸಾಧಿಸಲು ‘ಪಿತೃ ಪ್ರಧಾನ ವ್ಯವಸ್ಥೆ’ ತಡೆದಿರುತ್ತಿದ್ದರೆ ಇಂದಿರಾ ಗಾಂಧಿ ಪ್ರಧಾನಿ ಹೇಗಾಗಿರುತ್ತಿದ್ದರು? ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಶನಿವಾರ ಬೆಂಗಳೂರಿನ ಸಿಎಂಎಸ್ ಬ್ಯುಸಿನೆಸ್ ಸ್ಕೂಲ್ನ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತನಾಡಿದ ನಿರ್ಮಲಾ ಸೀತಾರಾಮನ್, 21 ವರ್ಷ ವಯಸ್ಸಿನ ‘ನಿರುದ್ಯೋಗಿ ಯುವಕರಿಗೆ’ 1 ಕೋಟಿ ಇಂಟರ್ನ್ಶಿಪ್ ಸೇರಿದಂತೆ ನವೋದ್ಯಮಗಳನ್ನು ಬೆಂಬಲಿಸಲು ಕೇಂದ್ರವು ಕೈಗೊಂಡಿರುವ ವಿವಿಧ ಕ್ರಮಗಳು ಮತ್ತು ಯುವಜನರಿಗೆ ಲಭ್ಯವಿರುವ ಸರ್ಕಾರದ ಯೋಜನೆಗಳ ಕುರಿತು ಚರ್ಚಿಸಿದರು.
ಇದೇ ವೇಳೆ ಮಹಿಳಾ ಸಬಲೀಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಪಿತೃಪ್ರಭುತ್ವವು ಎಡಪಂಥೀಯರು ಕಂಡುಹಿಡಿದ ಪರಿಕಲ್ಪನೆಯಾಗಿದೆ ಎಂದರು. ಅಲ್ಲದೆ ‘ಪಿತೃ ಪ್ರಧಾನ ವ್ಯವಸ್ಥೆ’ ಕೂಡ ಇಂದಿರಾ ಗಾಂಧಿ ಪ್ರಧಾನಿಯಾಗುವುದನ್ನು ತಡೆಯಲಾಗಲಿಲ್ಲ. ಭಾರತದಲ್ಲಿ ಮಹಿಳೆಯರು ಬಯಸಿದ್ದನ್ನು ಸಾಧಿಸಲು ಪಿತೃ ಪ್ರಧಾನ ವ್ಯವಸ್ಥೆಯು ತಡೆದಿದ್ದರೆ, ಇಂದಿರಾ ಗಾಂಧಿ ಅದನ್ನು ಹೇಗೆ ಪ್ರಧಾನಿಯಾದರು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಅಂತೆಯೇ ಇಂತಹ ಪರಿಭಾಷೆಗೆ ಮಾರುಹೋಗಬೇಡಿ. ನೀವು ನಿಮ್ಮ ಪರವಾಗಿ ನಿಂತು ತಾರ್ಕಿಕವಾಗಿ ಮಾತನಾಡಿದರೆ, ಪಿತೃ ಪ್ರಧಾನ ವ್ಯವಸ್ಥೆಯು ನಿಮ್ಮ ಕನಸುಗಳನ್ನು ಸಾಧಿಸಲು ನಿಮ್ಮನ್ನು ತಡೆಯುವುದಿಲ್ಲ. ಅಂತೆಯೇ ಮಹಿಳೆಯರಿಗೆ ಸಮರ್ಪಕವಾಗಿ ಸೌಲಭ್ಯ ಕಲ್ಪಿಸಿಲ್ಲ, ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಿದೆ ಎಂದು ಒಪ್ಪಿಕೊಂಡರು. ನರೇಂದ್ರ ಮೋದಿ ಸರ್ಕಾರವು ನವೋದ್ಯಮಿಗಳಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.