ತೆಲಂಗಾಣ: ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣ ತೆಲುಗು ರಾಜಕೀಯ ಮತ್ತು ಚಿತ್ರರಂಗ ಎರಡರಲ್ಲೂ ಬಿರುಗಾಳಿ ಎಬ್ಬಿಸಿದೆ. ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದು ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಇದೇ ಪ್ರಕರಣದಲ್ಲಿ ಸಂಧ್ಯಾ ಚಿತ್ರಮಂದಿರದ ಮಾಲೀಕ, ಮ್ಯಾನೇಜರ್, ಅಲ್ಲು ಅರ್ಜುನ್ರ ಬಾಡಿಗಾರ್ಡ್ ಹಾಗೂ `ಪುಷ್ಪ 2′ ಸಿನಿಮಾದ ನಿರ್ಮಾಪಕರ ಮೇಲೂ ದೂರು ದಾಖಲಾಗಿತ್ತು.
ಪ್ರಕರಣದ ವಿರುದ್ಧ ಅಲ್ಲು ಅರ್ಜುನ್ ಹಾಗೂ ಇನ್ನೂ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ ತೆಲಂಗಾಣ ಹೈಕೋರ್ಟ್ ಇದೀಗ `ಪುಷ್ಪ 2′ ಸಿನಿಮಾದ ನಿರ್ಮಾಪಕರಿಗೆ ರಿಲೀಫ್ ದೊರೆತಿದ್ದು, ಸಿನಿಮಾದ ನಿರ್ಮಾಪಕರನ್ನು ಬಂಧಿಸದಂತೆ ಸೂಚಿಸಿದೆ. ಪ್ರಕರಣದ ಕುರಿತಾಗಿ ದಾಖಲಾಗಿದ್ದ ಎಫ್ಐಆರ್ನಲ್ಲಿ ನಿರ್ಮಾಪಕರ ಹೆಸರನ್ನೂ ಸಹ ಸೇರಿಸಿದ್ದ ಕಾರಣ ನಿರ್ಮಾಪಕರು ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ನಿರ್ಮಾಪಕರ ಪರ ವಕೀಲರು, `ನಿರ್ಮಾಪಕರು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಚಿತ್ರಮಂದಿರಗಳ ಬಳಿ ನಡೆವ ಯಾವುದೇ ಘಟನೆಗೆ ಅವರು ಕಾರಣಕರ್ತರಲ್ಲ’ ಎಂದು ವಾದಿಸಿದರು. ವಾದ ಮನ್ನಿಸಿದ ನ್ಯಾಯಮೂರ್ತಿಗಳು ನಿರ್ಮಾಪಕರನ್ನು ಬಂಧಿಸದಂತೆ ಸೂಚಿಸಿದ್ದಾರೆ.ಕಾನೂನು ಸುವ್ಯವಸ್ಥೆಗೆ ನಿರ್ಮಾಪಕರು ಹೇಗೆ ಜವಾಬ್ದಾರರಾಗುತ್ತಾರೆ ಎಂದು ಪ್ರಶ್ನೆ ಮಾಡಿರುವ ಹೈಕೋರ್ಟ್, ನಿರ್ಮಾಪಕರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿರುವುದು ಮಾತ್ರವೇ ಅಲ್ಲದೆ, ಎರಡು ವಾರಗಳ ಕಾಲಾವಕಾಶ ನೀಡಿ, ಪ್ರಕರಣದಲ್ಲಿ ಆರೋಪಿಗಳನ್ನು ಸರಿಯಾಗಿ ಗುರುತಿಸಿ ಹೊಸದಾಗಿ ಪಿಟಿಷನ್ ಸಲ್ಲಿಸುವಂತೆ ಹೇಳಿದೆ.
ಅಲ್ಲು ಅರ್ಜುನ್ಗೆ ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರಾಗಿದ್ದು, ರೆಗ್ಯುಲರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು (ಜನವರಿ 03) ವಿಚಾರಣೆ ನಡೆಯಲಿದೆ. ಈ ಹಿಂದೆಯೂ ಒಂದು ಬಾರಿ ವಿಚಾರಣೆ ನಡೆದಿದ್ದು, ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಅಲ್ಲು ಅರ್ಜುನ್ ಜಾಮೀನಿನ ಆದೇಶ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.