ರಾಮನಗರ : ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಂಕಾಳಿ ದೇವತೆಯನ್ನು ಸುಮಾರು ನಾನೂರು ವರ್ಷಗಳಿಂದ ಭಕ್ತರು ಆರಾಧಿ ಸುತ್ತಾ ಬಂದಿದ್ದು, ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೂ ಮುನ್ನಾ ಬನ್ನಿಮಹಂಕಾಳಿ ಅಮ್ಮನವರ ಕರಗ ಅದ್ದೂರಿಯಾಗಿ ನೆರವೇರಲಿದೆ.
ಹಿನ್ನಲೆ : ನಾನೂರು ವರ್ಷಗಳ ಹಿಂದೆ ಮೈಸೂರು ರಾಜರ ಸಂಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರದಿಂದ ಮೈಸೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು. ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು’ ಎಂದು ತಿಳಿಸಿದಳು
ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯು ಭಕ್ಷಿ ಬಾಲಾಜಿ ಅವರನ್ನು ಕೋರಿದಳು. ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂತಲೂ, ಎರಡು ಹೆಸರಿನಿಂದ ಕರೆಯುತ್ತಾರೆ.ಅಂದಿನಿಂದ ಇಂದಿನವರೆಗೂ ಅಮ್ಮನ ವರನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿನಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್.ಎನ್.ಯೋಗೇಶ್ 20ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.
ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದ್ದು, ಈಗ ನಗರದಲ್ಲಿ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ. ಸೋಮವಾರ ತಡರಾತ್ರಿ 2 ಗಂಟೆಗೆ ಪ್ರಾರಂಭವಾಗಿ ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆ ವೇಳೆಗೆ ಕರಗ ಅಗ್ನಿಕೊಂಡ ಪ್ರವೇಶ ಮಾಡುತಿತ್ತು. ಈಗ ರಾಮನಗರ ನಗರ ವ್ಯಾಪ್ತಿ ಹೆಚ್ಚಾಗಿ ಬೆಳೆಯುತ್ತಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯ್ ಕುಮಾರ್ ತಿಳಿಸಿದರು.
ರೋಗರುಜಿನ ಬರುವುದಿಲ್ಲ : ‘ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆಗೊಂಡಾಗಿ ನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ ಯಾವುದೆ ಸಾಮೂಹಿಕ ಕಾಯಿಲೆಗಳಾಗಲಿ ಅಥವಾ ರೋಗ ರುಜಿನಗಳಾಗಲಿ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆಯಾಗಿದೆ’ ಎಂದು ಹಿರಿಯ ಅರ್ಚಕ ಎಂ.ಎಸ್. ಸತ್ಯನಾರಾಯಣ ತಿಳಿಸಿದರು.