ಬೆಂಗಳೂರು: ಇಷ್ಟು ದಿನಗಳ ಕಾಲ ಅಮೆರಿಕದ ವೀಸಾ ಪಡೆಯಲು ಕರ್ನಾಟಕದ ಜನತೆ ಹೈದರಾಬಾದ್ ಅಥವಾ ಚೆನ್ನೈಗೆ ಹೋಗಬೇಕಿತ್ತು. ಇದು ಹೈರಾಣದ ಸಂಗತಿಯಾಗಿತ್ತು. ಆದರೆ, ಇನ್ಮುಂದೆ ಹೈದರಾಬಾದ್ ಅಥವಾ ಚೆನ್ನೈಗೆ ತೆರಳುವ ಅವಶ್ಯಕತೆ ಇಲ್ಲ, ಬೆಂಗಳೂರಿನಲ್ಲೇ ಅಮೆರಿಕದ ವೀಸಾ ಸಿಗುತ್ತದೆ. ಹೌದು, ಬೆಂಗಳೂರಿನಲ್ಲಿ ಜನವರಿ ತಿಂಗಳಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ. ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯನಿರತವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೇಟ್ಟಿ ಹೇಳಿದ್ದಾರೆ.
ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರುನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಿಕವಾಗಿತ್ತು. ಆದರೆ, ಈಗ ಕಚೇರಿ ಸ್ಥಾಪನೆಗೆ ನಾವು ಶ್ರಮಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ದೂತವಾಸ ಕಚೇರಿ ಆರಂಭವಾಗುತ್ತಿರುವ ವಿಚಾರವಾಗಿ ಬಿಜೆಪಿ ಸಂಸದ ತೇಜೆಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದು, “ಬೆಂಗಳೂರಿನ ಜನರಿಗೆ ಇದು ಅತಿ ದೊಡ್ಡ ಸುದ್ದಿ, ಜನವರಿಯಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.