ಪೀಣ್ಯ,ದಾಸರಹಳ್ಳಿ: ಪತ್ರಕರ್ತರಾದ ಗೋಪಿ ಆ್ಯಕ್ಷನ್ ಕಟ್ ಹೇಳಲು ಹೊರಟಿರುವ ಗೋಪಿ ಫಿಲಂಸ್ ಬ್ಯಾನರ್ ನ ಮೂಲಕ ನಿರ್ಮಾಣವಾಗುತ್ತಿರುವ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಕೆಂಗೇರಿಯ ಶ್ರೀ ವಿಶ್ವವಿದ್ಯಾ ಗಣಪತಿಯ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರೋದ್ಯಮದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಯುವ ಉತ್ಸಾಹಿಗಳ ತಂಡದೊಂದಿಗೆ ಗೋಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮೂಲಕ ಚಿತ್ರರಂಗದಲ್ಲೊಂದು ಮೈಲಿಗಲ್ಲು ಸಾಧಿಸಲು ಚಿತ್ರತಂಡದವರು ಹೊರಟಿದ್ದಾರೆ. ಗೋಪಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದಾಗಿದೆ.
ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಈ ಚಿತ್ರಕ್ಕೆ ಚಿತ್ರದ ಕೋ-ಡೈರೆಕ್ಟರ್ ಆಗಿ ರಾಮ್ ಪವಾರ್, ಸಹ ನಿರ್ದೇಶಕರಾಗಿ ತಬ್ರೇಜ್ ಆಂದೋಲಾ, ಸಹಾಯಕ ನಿರ್ದೇಶಕರಾಗಿ ಕಿರಣ್ ರೇಕುಲ್ ಹಾಗೂ ರಾಜ್ ಕುಮಾರ್ ಹಿರೋಳ್ ನಿರ್ದೇಶನದ ತಂಡದಲ್ಲಿದ್ದಾರೆ.ಚಿತ್ರದ ಸಂಭಾಷಣೆಯನ್ನು ಚಿತ್ರರಂಗದಲ್ಲಿ ಜೋಡೆತ್ತುಗಳೆಂದೇ ಖ್ಯಾತಿ ಹೊಂದಿರುವ ವಿನಾಯಕ್ ಅಂಬಿಗೇರ್ ಹಾಗೂ ದತ್ತಾತ್ರೇಯ(ದತ್ತು) ರವರು ಬರೆಯಲಿದ್ದಾರೆ.
ಸಾಹಿತ್ಯದ ಹೊಣೆಯನ್ನು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಪಣ ತೊಟ್ಟಿರುವ ಬಿ.ಎಸ್ ರವಿಚಂದ್ರ ವಹಿಸಿಕೊಂಡಿದ್ದು ಹಲವಾರು ಚಿತ್ರಗಳಿಗೆ ಸಾಹಸ ನೀಡಿರುವ ಬಂಡೆ ಚಂದ್ರು ರವರು ತಮ್ಮ ಸಾಹಸದ ಝಲಕ್ ಅನ್ನು ಈ ಚಿತ್ರದಲ್ಲಿ ತೋರಿಸಲಿದ್ದಾರೆ. ಟೈಟಲ್ ಡಿಸೈನರ್ ಓಂ ಗಿರೀಶ್ ತಂಡದಲ್ಲಿರಲಿದ್ದಾರೆ.ಶ್ರೀ ವಿಶ್ವವಿದ್ಯಾ ಗಣಪತಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಸ್ಕ್ರಿಪ್ಟ್ ಪೂಜಾ ಕಾರ್ಯಕ್ರಮದಲ್ಲಿ ಕುಮಾರ ಸೀಟಿ, ಪುರುಷೋತ್ತಮ್ ಕೆ.ಪಿ, ದಾವಣಗೆರೆ ಮಂಜುನಾಥ್, ಕೃತಿಕ್ ಪಿ ಸೇರಿದಂತೆ ಹಲವಾರು ಗಣ್ಯರು, ಚಿತ್ರದ ತಾಂತ್ರಿಕ ವರ್ಗ ಉಪಸ್ಥಿತರಿದ್ದರು.