ಬೆಂಗಳೂರು: ಬೆಳಗಾವಿ, ಬಳ್ಳಾರಿ, ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಬಾಣಂತಿ ಸಾವಿನ ಸರಣಿ ಮುಂದುವರೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟರೆ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ನಗರದಲ್ಲಿ ಇಬ್ಬರು ಬಾಣಂತಿಯರ ಸಾವಾಗಿದೆ.
ಪಶ್ಚಿಮ ಬಂಗಾಳ ಮೂಲದ ತಾಲುಕ್ದಾರ್ ಮಂಡಲ್ ಎಂಬ 27 ವರ್ಷದ ಮಹಿಳೆ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಹಿಳೆಗೆ ಎಲ್ಲಾ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಅತಿಯಾದ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಎರಡನೇ ಮಗುವಿನ ಹೆರಿಗೆಗಾಗಿ ಭಾನುವಾರ ಬೆಳಗ್ಗೆ ಮಹಿಳೆ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ವೇಳೆಗೆ ಸಹಜ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ರಾತ್ರಿ ವೇಳೆ ಅತೀವ್ರ ರಕ್ತಸ್ರಾವವಾಗಿದ್ದು, ಹೀಗಾಗಿ ವಾಣಿ ವಿಲಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ತಿಳಿದುಬಂದಿದೆ.
ಹೆಚ್ಚಿನ ಚಿಕಿತ್ಸೆಗಾಗಿ ವಾಣಿ ವಿಲಾಸ್ ಆಸ್ಪತ್ರೆಗೆ ಕರೆತರಲಾಗಿದ್ದು, ಮಹಿಳೆಗೆ ಅಗತ್ಯ ಚಿಕಿತ್ಸೆಗಳನ್ನ ನೀಡಲಾಗಿತ್ತು. ಆದರೆ, ಸೋಮವಾರ ಮೃತಪಟ್ಟಿದ್ದಾರೆ. ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇನ್ನೊಂದು ಸಾವಿನಲ್ಲಿ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿ, ಶಸ್ತ್ರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಡೂರು ಮೂಲದ ಅನುಷಾ ಎಂಬುವವರು ಮೃತಪಟ್ಟಿದ್ದಾರೆ.