ಆಗ್ರಾ: ಟ್ರಕ್ ಚಾಲಕನೊಬ್ಬ ತನ್ನ ವಾಹನದಡಿಯಲ್ಲಿ ಇಬ್ಬರನ್ನು ಸುಮಾರು 300 ಮೀಟರ್ ವರೆಗೆ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಅಮಾನುಷ ಕೃತ್ಯವನ್ನು ಕಂಡ ಸ್ಥಳೀಯರು ಚಾಲಕನಿಗೆ ಬಲವಂತವಾಗಿ ಟ್ರಕ್ ನಿಲ್ಲಿಸಿ, ವಾಹನದ ಕೆಳಗಿದ್ದವರನ್ನು ಹೊರತೆಗೆದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಚಾಲಕನನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಆಗ್ರಾದ ನುನ್ಹೈ ನಿವಾಸಿಗಳಾಗಿರುವ ಇಬ್ಬರು ವ್ಯಕ್ತಿಗಳು ಮೊನ್ನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಾಟರ್ವರ್ಕ್ಸ್ನಿಂದ ರಾಮ್ಬಾಗ್ ಕಡೆಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಚಾಲಕ, ಟ್ರಕ್ ನ್ನು ನಿಲ್ಲಿಸುವ ಬದಲು ವೇಗವಾಗಿ ಇಬ್ಬರನ್ನೂ ಕೆಳಗೆ ಸಿಲುಕಿಸಿ ಎಳೆದುಕೊಂಡು ಹೋಗಿದ್ದಾನೆ.
ಇಬ್ಬರು ಯುವಕರನ್ನು ಕ್ಯಾಂಟರ್ ಚಾಲಕ ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ನಂತರ ಕೆಲವು ನಿವಾಸಿಗಳು ಚಾಲಕನನ್ನು ಬಲವಂತವಾಗಿ ನಿಲ್ಲಿಸಿ ಯುವಕರನ್ನು ರಕ್ಷಿಸಿದರು ಎಂದು ಛಟ್ಟಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತೀವ್ರ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ, ಅವರ ದೇಹಸ್ಥಿತಿ ಸ್ಥಿರವಾಗಿದೆ. ಯುವಕರು ಆಗ್ರಾ ಮೂಲದವರಾಗಿದ್ದು, ಘಟನೆಯ ನಂತರ ಕ್ಯಾಂಟರ್ ಚಾಲಕನನ್ನು ಬಂಧಿಸಿ ಕ್ಯಾಂಟರ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.