ಇಂದಿನವರೆಗೂ ಉರ್ವಿಲ್ ಪಟೇಲ್ ಎಂಬ ಬ್ಯಾಟರ್ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಅಷ್ಟೇ ಏಕೆ ಕೇವಲ 3 ದಿನಗಳ ಹಿಂದೆ ನಡೆದ ಐಪಿಎಲ್ ಹರಾಜಿನಲ್ಲೂ ಈತನ ಹೆಸರಿರಲಿಲ್ಲ. ಒಂದು ವೇಳೆ ಕಳೆದ ವಾರವೇನಾದರೂ ಈ ಸಾಧನೆ ಮಾಡಿದ್ದಿದ್ದರೆ ಭಾರೀ ಮೊತ್ತಕ್ಕೆ ಬಿಕರಿಯಾಗುತ್ತಿದ್ದರೋಏನೋ!
ಗುಜರಾತ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಉರ್ವಿಲ್ ಪಟೇಲ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಅವರು ಕೇವಲ 28 ಎಸೆತಗಳಲ್ಲಿ ಮೂರಂಕಿ ಮೊತ್ತ ಮುಟ್ಟಿದರು. ಈ ಮೂಲಕ ದೇಶಿ ಕ್ರಿಕೆಟ್ ನಲ್ಲಿ ಅತಿ ವೇಗದ ಟಿ20 ಶತಕ ಹೊಡೆದ ರಿಷಬ್ ಪಂತ್ ಅವರನ್ನು ಮೀರಿ ನಿಂತಿದ್ದಾರೆ. ಇದು ಟಿ20 ಕ್ರಿಕೆಟ್ ನಲ್ಲಿ ವಿಶ್ವದಲ್ಲೇ ದಾಖಲಾದ ಎರಡನೇ ಅತಿ ವೇಗದ ಶತಕವೂ ಹೌದು.
ರಿಷಬ್ ದಾಖಲೆ ನುಚ್ಚುನೂರು ಇದು ಭಾರತೀಯ ಆಟಗಾರನ ಅತಿ ವೇಗದ ಟಿ20 ಶತಕವಾಗಿದೆ. ಲಿಸ್ಟ್ ಎ ಕ್ರಿಕೆಟ್ನಲ್ಲಿ ಭಾರತೀಯರ 2ನೇ ವೇಗದ ಶತಕವನ್ನು ದಾಖಲಿಸಿದ ಒಂದು ವರ್ಷದ ನಂತರ ಈ ಶತಕ ಮೂಡಿ ಬಂದಿದೆ. 26ರ ಹರೆಯದ ಉರ್ವಿಲ್, 6 ವರ್ಷಗಳ ಹಿಂದೆ ರಿಷಭ್ ಪಂತ್ ಸಿಡಿಸಿದ್ದ ಅತಿ ವೇಗದ ಟಿ20 ಶತಕವನ್ನು ಹಿಂದಿಕ್ಕಿದ್ದಾರೆ.