ರಾಣಿ ಚಿತ್ರದ ಕತೆಯನ್ನು ನಿರ್ದೇಶಕ ಮಧುಚಂದ್ರ ಸುಮಾರು 700 ಜನಕ್ಕೆ ಹೇಳಿದ್ದಾರೆ, ಅವರಿಂದ ಫೀಡ್ ಬ್ಯಾಕ್ ತೆಗೆದುಕೊಂಡರು. ಅದರ ವೀಡಿಯೋ ಕೂಡ ಮಾಡಿದರು !! ಈ ಕತೆಯನ್ನು ತುಂಬಾ ಜನರು ಇಷ್ಟಪಡುತ್ತಾರೆ ಎಂದು ಖಚಿತ ಪಡಿಸಿಕೊಂಡ ನಂತರ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಪ್ರಾಮಾಣಿಕ ಮತ್ತು ವಿಭಿನ್ನ ಪ್ರಯತ್ನ ನೋಡಿ ಅವರಿಗೆ 150 ಜನ ಫ್ಯಾಮಿಲಿಗಳು ಸೇರಿ ಚಿತ್ರ ನಿರ್ಮಿಸಲು ಮುಂದೆ ಬಂದರು.
ಚಿತ್ರದ ರಿಲೀಸ್ ಮುಂಚೆಯೇ ಚಿತ್ರತಂಡದ 150 ಜನ ನಿರ್ಮಾಪಕರು ತಮ್ಮ ಫ್ಯಾಮಿಲಿ, ನೆಂಟರು, ಗೆಳೆಯರು ಎಲ್ಲರನ್ನೂ ಸೇರಿದಂತೆ ಸುಮಾರು 2 ಸಾವಿರ ಜನಕ್ಕೆ ಈಗಾಗಲೇ ಸಿನಿಮಾ ತೋರಿಸಿದ್ದಾರೆ. ಅವರೆಲ್ಲ ನೋಡಿ ಭೇಷ್ ಹೇಳಿದ ನಂತರವೇ ಸಿನಿಮಾ ಪ್ರಚಾರಕ್ಕೆ ಲಕ್ಷಗಟ್ಟಲೆ ಧೈರ್ಯವಾಗಿ ಸುರಿದಿದ್ದಾರೆ. ತಮ್ಮ ಚಿತ್ರವನ್ನು ಮೊದಲೇ ಪ್ರೇಕ್ಷಕರಿಗೆ ತೋರಿಸಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿ ನಂತರ ಇಡೀ ಕನ್ನಡ ಪ್ರೇಕ್ಷಕರ ಮುಂದೆ ಸಿನಿಮಾ ರಿಲೀಸ್ ಮಾಡುವ ವಿಧಾನವನ್ನು ನಿರ್ದೇಶಕ ಮಧುಚಂದ್ರ ಅವರಿಗೆಲ್ಲಾ ಹೇಳಿದಾಗ ಎಲ್ಲರಿಗೂ ಇದು ಸರಿ ಎನ್ನಿಸಿ ಹೀಗೆ ಮಾಡಿದ್ದಾರೆ.
ಸುಮಾರು 200 ಜನರಂತೆ 10 ಶೋಸ್ ಗಳನ್ನು ಸಣ್ಣ ಪ್ರಮಾಣದ ಥಿಯೇಟರ್ ನಲ್ಲಿ ಮಾಡಿ ಪರೀಕ್ಷೆ ಮಾಡಿದ್ದಾರೆ.ಇದು ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ರೀತಿಯಲ್ಲಿ ಹೊಸ ಮಾದರಿ ಮಾರ್ಗವನ್ನು ತೋರಿಸಿಕೊಟ್ಟಿದೆ. ಹೀರೋ ಸೈಕೋ ಜಯಂತ್ ಆಲಿಯಾಸ್ ದೀಪಕ್ ಸುಬ್ರಹ್ಮಣ್ಯ ಈಗಾಗಲೇ ಕರ್ನಾಟಕದ ಎಲ್ಲಾ ಪ್ರಮುಖ ಜಿಲ್ಲೆಗಳಿಗೂ ಭೇಟಿ ನೀಡಿ ಚಿತ್ರದ ಪ್ರಚಾರ ಮಾಡಿದ್ದಾರೆ.