ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ ಪೊಲೀಸರು ಇಬ್ಬರು ಕ್ರಿಮಿನಲ್ಗಳನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಇದಲ್ಲದೆ, ಗಾಯಗೊಂಡ ಮತ್ತೋರ್ವನನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳೊಂದಿಗಿನ ಈ ಎನ್ಕೌಂಟರ್ನಲ್ಲಿ ಓರ್ವ ಪೊಲೀಸರಿಗೂ ಗುಂಡು ತಗುಲಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದರೋಡೆ ಮಾಡುವ ಉದ್ದೇಶದಿಂದ 8 ರಿಂದ 10 ಮಂದಿ ದುಷ್ಕರ್ಮಿಗಳು ಹಿಂದೂನಿ ಗ್ರಾಮಕ್ಕೆ ಬಂದಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಅಪರಾಧಿಗಳನ್ನು ಬಂಧಿಸಲು ತಕ್ಷಣವೇ ಪೊಲೀಸ್ ತಂಡವೊಂದು ಹಿಂದೂನಿಗೆ ತಲುಪಿತು. ಇದೇ ವೇಳೆ ಪೊಲೀಸ್ ತಂಡ ಮತ್ತು ದುಷ್ಕರ್ಮಿಗಳ ನಡುವೆ ಎನ್ಕೌಂಟರ್ ನಡೆದಿದ್ದು, ಇಬ್ಬರು ದುಷ್ಕರ್ಮಿಗಳು ಸಾವನ್ನಪ್ಪಿದ್ದಾರೆ. ಮೂರನೇ ದುಷ್ಕರ್ಮಿಯನ್ನು ಬಂಧಿಸಲಾಯಿತು. ಈ ಎನ್ಕೌಂಟರ್ನಲ್ಲಿ ಒಬ್ಬ ಪೊಲೀಸ್ ಸಹ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ಯೆಗೀಡಾದ ಪಾತಕಿಗಳಿಬ್ಬರೂ ನಳಂದ ಜಿಲ್ಲೆಯ ನಿವಾಸಿಗಳು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಪಾಟ್ನಾದಲ್ಲಿ ಕೆಲವು ದರೋಡೆ ಘಟನೆಗಳು ಸಂಭವಿಸಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ದುಷ್ಕರ್ಮಿಗಳ ಕ್ರಿಮಿನಲ್ ದಾಖಲೆಗಳನ್ನು ಹೊರತೆಗೆಯಲು ಮತ್ತು ಅವರನ್ನು ಪತ್ತೆಹಚ್ಚಲು ತಂಡವನ್ನು ರಚಿಸಲಾಗಿದೆ. ಈ ಹಿಂದೂನಿ ಗ್ರಾಮದಲ್ಲಿ ಈ ದುಷ್ಕರ್ಮಿಗಳು ದರೋಡೆ ಮಾಡಲು ಹೊರಟಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ್ದು, ನಂತರ ನಾವು ದಾಳಿಗೆ ತಂಡವನ್ನು ರಚಿಸಿದ್ದೇವು. ಪೊಲೀಸರನ್ನು ಕಂಡ ತಕ್ಷಣ ಅಪರಾಧಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು. ಇದರಲ್ಲಿ ಒಬ್ಬ ಪೊಲೀಸ್ ಗೆ ಗುಂಡು ತಗುಲಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು ಇಬ್ಬರು ಅಪರಾಧಿಗಳು ಬಲಿಯಾಗಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಇಬ್ಬರೂ ದುಷ್ಕರ್ಮಿಗಳು ನಳಂದಾ ನಿವಾಸಿಗಳಾದ ವಿವೇಕ್ ಮತ್ತು ಲಾಲ್ದಾಹಿನ್ ಎಂದು ತಿಳಿದುಬಂದಿದೆ.