ಬೆಂಗಳೂರು: ಉತ್ತರ ಕರ್ನಾಟಕದ ಜನರು ಶ್ರಮಜೀವಿಗಳಾಗಿದ್ದು, ನಮ್ಮತನ ಉಳಿಸಿ ಕೊಂಡು ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರಿನ ಯಲಹಂಕದ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಕ್ರಾಂತಿ ಎಂದರೆ ನಮಗೆಲ್ಲ ಸಂಭ್ರಮ ಸಡಗರ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿತಾಯಿಯನ್ನು ಪೂಜಿಸುವ, ಒಕ್ಕಲುತನಕ್ಕೆ ಮೇಟಿಯಾಗಿರುವ ಎತ್ತುಗಳನ್ನು ಪೂಜೆ ಮಾಡುತ್ತೇವೆ. ಉತ್ತರ ಕರ್ನಾಟಕದ ಸೊಗಡನ್ನು ಬೆಂಗಳೂರಿನಲ್ಲಿ ತರುವಲ್ಲಿ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ ಯಶಸ್ವಿಯಾಗಿದೆ. ದೂರದ ಉತ್ತರ ಕರ್ನಾಟಕದವರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ನೀವು ಇಲ್ಲಿದ್ದರೂ ನಿಮ್ಮ ಮನಸು ನಿಮ್ಮೂರಿನ ಕಡೆ ಇದೆ.
ಎಲ್ಲಿಯೇ ಹೋದರು ನಮ್ಮತನ, ನಮ್ಮೂರು ನಮ್ಮ ಹಿರಿಯರು, ಅಕ್ಕತಂಗಿಯರನ್ನು ಮರೆಯಬಾರದು. ಬೆಂಗಳೂರಿಗೆ ಬಂದಾಗ ಉತ್ತರ ಕರ್ನಾಟಕ ಮರೆಯಬಾರದು, ದೆಹಲಿಗೆ ಹೋದಾಗ ಕರ್ನಾಟಕ ಮರೆಯಬಾರದು ಎಂದು ಹೇಳಿದರು.ಉತ್ತರ ಕರ್ನಾಟಕದವರ ಭಾಷೆ ಬೆಂಗಳೂರಿಗಿರಿಗೆ ಹುಂಬರ ಭಾಷೆ ಅಂತ ಅನಿಸುತ್ತದೆ. ನಮ್ಮ ಭಾಷೆ ಬಾಂಧವ್ಯಕ್ಕೆ ಹತ್ತಿರ ಇರುವ ಭಾಷೆ. ನಮ್ಮ ಕ್ಷೇತ್ರದಾಗ ಜನರಿಗೆ ಬಹಳ ಗೌರವ ಕೊಟ್ಟು ಮಾತನಾಡಿದರೆ, ಯಾಕ್ರಿ ಸಾಹೆಬ್ರ ಏನರ ತಪ್ಪಾಗೇತನ ಅಂತ ಕೇಳ್ತಾರು. ನಮ್ಮದು ನೇರ ನುಡಿ, ಇದ್ದಿದ್ದ ಇದ್ದಂಗ ಹೇಳತೇವಿ. ಬಹಳ ವರ್ಣನೆ ಮಾಡುವವರು ನಾವಲ್ಲ. ಹೃದಯಕ್ಕೆ ಮುಟ್ಟುವಂತೆ ಮಾತನಾಡುತ್ತೇವೆ. ಯಾರದರ ಜೋಡಿ ಜಗಳಾ ಆಡಿದ್ದರೆ ಉದ್ರಿ ಇಲ್ಲ. ನಮ್ಮ ಮನಸಿನಲ್ಲಿ ನಂಜಿಲ್ಲ. ಹೊರಗಡೆ ಬಂದರೆ ಎಲ್ಲವನ್ನು ಮರೆಯುತ್ತೇವೆ ಎಂದರು.
ನಮ್ಮ ಕಲೆ, ಸಾಹಿತ್ಯ, ಸಂಗೀತಕ್ಕೆ ವಿಶೇಷ ಸ್ಥಾನ ಇದೆ. ಹಿಂದುಸ್ತಾನಿ ಸಂಗೀತ ನಮ್ಮ ಉತ್ತರ ಕರ್ನಾಟಕದ ನೆಲದಲ್ಲಿ ಹುಟ್ಟಿದೆ. ಅತಿ ಹೆಚ್ಚು ಜ್ಞಾನಪೀಠ ಪಡೆದವರು ಉತ್ತರ ಕರ್ನಾಟಕದವರಿದ್ದಾರೆ. ನಾವು ಅತಿ ಹೆಚ್ಚು ಒಕ್ಕಲುತನ ಮಾಡುತ್ತೇವೆ. ಯಾರು ಮಣ್ಣಿನ ಜೊತೆ ಜೀವನ ಮಾಡುತ್ತಾರೆ. ಅವರು ಶ್ರಮಜೀವಿಗಳು, ಯಾರು ಮಣ್ಣಿನ ಜೊತೆ ಇರುತ್ತಾರೆ ಅವರು ಪ್ರಾಮಾಣಿಕರಾಗಿರುತ್ತಾರೆ. ಅವರು ಸಕಾರಾತ್ಮಕವಾಗಿರುತ್ತಾರೆ. ನಾವು ಶ್ರಮ ಹಾಗೂ ಭೂಮಿ ತಾಯಿ ಮೇಲೆ ನಂಬಿಕೆ ಇಟ್ಟವರು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಜನ ಇದ್ದಾರೆ. ಗುಡ್ಡಗಾಡು ಪ್ರದೇಶದ ಜನರು ಕಠಿಣ ಶ್ರಮ ಜೀವಿಗಳು, ಕರಾವಳಿ ಜನರು ಸಾಹಸಿಗರು, ಹೇಗೆ ಪರಿಸರ ಇರುತ್ತದೆ ಹಾಗೆ ನಮ್ಮ ಬದುಕು ಇರುತ್ತದೆ. ಬೆಂಗಳೂರಿಗೆ ಬಂದು ನೀವು ಯಶಸ್ವಿಯಾಗಿ ಜೀವನ ಕಟ್ಟಿಕೊಂಡಿದ್ದೀರಿ, ಬೆಂಗಳೂರಿನ ಜನರು ಉತ್ತರ ಕರ್ನಾಟಕದ ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಬಯಸುತ್ತಾರೆ. ನಾವು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತೇವೆ ಎಂದು ಹೇಳಿದರು.
ಹೃದಯವಂತ ವಿಶ್ವನಾಥ: ಯಲಹಂಕ ಶಾಸಕ ವಿಶ್ವನಾಥ ಅವರು ಹೃದಯ ಶ್ರೀಮಂತರಿದ್ದಾರೆ. ಎಲ್ಲ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗದುಕೊಂಡು ಹೋಗುತ್ತಿದ್ದಾರೆ. ಯಲಹಂಕ ಚಿತ್ರಣವನ್ನು ಬದಲಾಯಿಸಿದ್ದಾರೆ. ಅವರನ್ನು ನೋಡಿದರೆ ವೀರ ಸಿಂಧೂರ ಲಕ್ಷ್ಮಣ ನೆನಪಾಗುತ್ತಾರೆ. ವಿಶ್ವನಾಥ ಅವರೊಂದಿಗೆ ಸಂಘದ ಸಂಬಂಧ ಇರಲಿ ಎಂದು ಹೇಳಿದರು.
ಉತ್ತರ ಕರ್ನಾಟಕದ ಜನರಿಗೆ ಬೆಂಗಳೂ ರಿನಲ್ಲಿ ನಮ್ಮ ಅವಧಿಯಲ್ಲಿ ಮೂರು ಎಕರೆ ಜಮೀನು ಕೊಟ್ಟಿದ್ದೇವೆ. ಅಲ್ಲಿ ಉತ್ತರ ಕರ್ನಾಟಕ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಕಾರ್ಯ ಆರಂಭವಾಗುವ ವಿಶ್ವಾಸ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಲಹಂಕದ ರಾಮಕೃಷ್ಣ ವೇದಾಂತ ಆಶ್ರಮದ ಅಭಯಾನಂದ ಮಹಾರಾಜ್ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮೇಟಿ, ಯೋಗ ಗುರು ಭವನಲಾಲ್ ಆರ್ಯ, ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ದಿ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ ಹಿರೇಮಠ, ಅಧ್ಯಕ್ಷರಾದ ಶಿವಶರಣಪ್ಪ ಹಾಗೂ ಇತರ ಗಣ್ಯರು ಹಾಜರಿದ್ದರು.