ಜೈಪುರ: ಉದಯಪುರದ ಅರಮನೆ ಪ್ರವೇಶ ವಿಚಾರದಲ್ಲಿ ರಾಜಮನೆತದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮೇವಾರದ 77ನೇ ಮಹಾರಾಣಾ ಆಗಿ ಪಟ್ಟಾಭಿಷೇಕಗೊಂಡ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮತ್ತು ಅವರ ಬೆಂಬಲಿಗರಿಗೆ ಉದಯಪುರ ನಗರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ. ಇದರಿಂದಾಗಿ ರಾಜಮನೆತನದ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ಹಿಂಸಾಚಾರ ನಡೆದಿದೆ.
ರಾಜಮನೆತನದ ವಿಧಿ ವಿಧಾನಗಳ ಪ್ರಕಾರ ಹೊಸದಾಗಿ ಪಟ್ಟ ಅಲಂಕರಿಸಿದ ಮುಖ್ಯಸ್ಥರು ಉದಯಪುರದ ಏಕಲಿಂಗನಾಥ ದೇವಾಲಯ ಮತ್ತು ನಗರದ ಅರಮನೆಗೆ ಭೇಟಿ ನೀಡುವುದು ವಾಡಿಕೆ. ಆದರೆ, ಮಹೇಂದ್ರ ಸಿಂಗ್ ಮೇವಾರ್ ಅವರ ಕಿರಿಯ ಸಹೋದರ ಅರವಿಂದ್ ಸಿಂಗ್ ಮೇವಾರ್ ನಡುವಿನ ದ್ವೇಷದ ಕಾರಣದಿಂದ ವಿಶ್ವರಾಜ್ ಅವರಿಗೆ ಉದಯಪುರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಚಿತ್ತೋರ್ ಗಢ ಕೋಟೆಯಲ್ಲಿ ನಡೆದ ಸಮಾರಂಭದ ಬಳಿಕ ವಿಶ್ವರಾಜ್ ಸಿಂಗ್ ಹಾಗೂ ಅವರ ಬೆಂಬಲಿಗರು ಅರಮನೆಗೆ ಭೇಟಿ ನೀಡಲು ಉದಯಪುರಕ್ಕೆ ತೆರಳಿದ್ದರು. ಈ ವೇಳೆ ಅವರನ್ನು ಪೊಲೀಸರು ತಡೆದಿದ್ದು, ಮಾತಿನ ಚಕಮಕಿ ನಡೆದಿದೆ. ಬೆಂಬಲಿಗರು ಬ್ಯಾರಿಗೇಡ್ ಧ್ವಂಸಗೊಳಿಸಲು ಪ್ರಯತ್ನಿಸಿದ್ದು, ಸ್ಥಳದಲ್ಲಿ ಉದ್ನಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿದ ಉದಯಪುರ ಜಿಲ್ಲಾಧಿಕಾರಿ ಅರವಿಂದ್ ಕುಮಾರ್ ಪೋಸ್ವಾಲ್, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ, ಅರಮನೆ ಪ್ರತಿನಿಧಿಗಳು ಮತ್ತು ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಕೆಲವು ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದೇವೆ, ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.