ಬೆಂಗಳೂರಿನ ಹೆಸರಾಂತ `ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ನಾಟ್ಯಗುರು ಮತ್ತು ನೃತ್ಯ ಕಲಾವಿದೆ ಶ್ರೀಮತಿ. ಅಭಿನಯ ನಟರಾಜನ್ ಅವರ ಬಳಿ ಕಳೆದ 8 ವರ್ಷಗಳಿಂದ ಬದ್ಧತೆಯಿಂದ ನೃತ್ಯ ಕಲಿಯುತ್ತಿರುವ ಬಹುಮುಖ ಪ್ರತಿಭೆ ಕು. ಇಷಿತಾ ಭಾರಧ್ವಾಜ್, ಶ್ರೀಮತಿ ತ್ರಿಪುರಾ ಟೇಕೂರ್ ಮತ್ತು ಶ್ರೀ ಶೈಲೇಶ್ ಕುಮಾರ್ ದುಬೆ ಅವರ ಮಗಳು. ಉತ್ತಮಾಂಕಗಳಿಂದ `ನೃತ್ಯಶ್ರೀ ಸರ್ಟಿಫಿಕೇಶನ್’ ಪಡೆದಿರುವ ಇಷಿತಾ ಈಗಾಗಲೇ ದೇಶಾದ್ಯಂತ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ ಅನುಭವ ಹೊಂದಿದ್ದು,
ಇದೀಗ ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲು ದಿ. 26 ಗುರುವಾರ ಬೆಳಗ್ಗೆ 9 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಈ ಕನ್ನಿಕೆಯ ಸುಮನೋಹರ ನೃತ್ಯಸೊಬಗನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಸುಸ್ವಾಗತ.ಬೆಂಗಳೂರಿನಲ್ಲಿ ವಾಸವಾಗಿರುವ ಇಂಡಿಯನ್ ಏರ್ ಫೋರ್ಸ್ ಅಧಿಕಾರಿ ಶ್ರೀ ಶೈಲೇಶ್ ಕುಮಾರ್ ದುಬೆ ಹಾಗೂ ಸಾಫ್ಟ್ ವೇರ್ ಎಂಜಿನಿಯರ್ ಶ್ರೀಮತಿ ತ್ರಿಪುರಾ ಟೇಕೂರ್ ಅವರ ಮುದ್ದಿನ ಮಗಳು ಕು. ಇಷಿತಾ ಬಹುಮುಖ ಪ್ರತಿಭೆ. ಅವಳಿಗೆ ನೃತ್ಯ ಬಾಲ್ಯದ ಒಲವು.
ಅವಳ ಆಸಕ್ತಿಗೆ ಪ್ರೋತ್ಸಾಹ ನೀಡಿದ ಹೆತ್ತವರು ಅವಳನ್ನು ಭರತನಾಟ್ಯ ಕಲಿಯಲು ಶ್ರೀಮತಿ ಅಭಿನಯಾ ಅವರ ಬಳಿ ಸೇರಿಸಿದರು. ಕಳೆದ 8 ವರ್ಷಗಳಿಂದ ಬಹು ಬದ್ಧತೆಯಿಂದ ನೃತ್ಯ ಕಲಿಸುತ್ತಿರುವ ಗುರು ಅಭಿನಯ ಅವರ ಉತ್ತಮ ತರಬೇತಿಯಲ್ಲಿ ಇಷಿತಾ ಬಹು ಆಸಕ್ತಿಯಿಂದ ಕಲಿಯುತ್ತ ನೃತ್ಯಗಾರ್ತಿಯಾಗಿ ರೂಪುಗೊಳ್ಳುತ್ತಿದ್ದಾಳೆ.ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ 8 ನೆಯ ತರಗತಿಯಲ್ಲಿ ಓದುತ್ತಿರುವ ಇಷಿತಾ ಓದಿನಲ್ಲಿ ಜಾಣೆ.
ಪುಸ್ತಕಗಳ ಓದಿನಲ್ಲಿ ಅದಮ್ಯ ಆಸಕ್ತಿ. ಕರಾಟೆಯಲ್ಲಿ ಪರ್ಪಲ್ ಬೆಲ್ಟ್ ಗಳಿಸಿರುವ, ಜೊತೆಗೆ ಶ್ರೀ ಅರವಿಂದ್ ಚಂದ್ರಶೇಖರನ್ ಅವರಲ್ಲಿ ವೀಣಾವಾದನವನ್ನೂ ಕಲಿಯುತ್ತ, ಚಿತ್ರರಚನೆಯಲ್ಲೂ ತೊಡಗಿಕೊಂಡಿರುವ ಬಹುಮುಖ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ. ಈಗಾಗಲೇ ಇವಳು ದೇಶದ ಅನೇಕ ರಾಜ್ಯಗಳ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವುದು ಇವಳ ವಿಶೇಷ.
-ವೈ.ಕೆ.ಸಂಧ್ಯಾ ಶರ್ಮ