ನೆಲಮಂಗಲ: ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ ಆದರೂ ಕನ್ನಡಿಗರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ರಾಜ್ಯ ಸರ್ಕಾರ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ಮೀಸಲಾತಿ ನೀಡಬೇಕು ಎಂದುಒತ್ತಾಯಿಸಿ ನನ್ನ ನೆಲದ ಉದ್ಯೋಗ ನನ್ನ ಹಕ್ಕು ಹೋರಾಟ ಸಮಿತಿ ಹಾಗೂವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ತಾಲ್ಲೂಕು ಕಛೇರಿ ಆವರಣದಲ್ಲಿ ಕನ್ನಡ ಪರ ಹೋರಾಟಗಾರರು ತೆಂಗಿನ ಚಿಪ್ಪು ಹಿಡಿದು ರಾಜ್ಯದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಲಭ್ಯವಿರುವ ಉದ್ಯೋಗಗಳು ಪರಭಾಷಿಗರ ಪಾಲಾಗುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗರಿಗೆ ಹುದ್ದೆನೀಡಲು ಹಿಂದೇಟು ಹಾಕುತ್ತಿವೆ. ಎಲ್ಲಕಡೆ ಕಾರ್ಖಾನೆ, ಬ್ಯಾಂಕ್,ಅಂಚೆ ಕಛೇರಿ ಸೇರಿದಂತೆ ಹೊರ ರಾಜ್ಯದವರೇ ಆವರಿಸಿಕೊಳ್ಳುತ್ತಿದ್ದಾರೆ. ಇದರಿಂದ ಕನ್ನಡಿಗರ ಮಕ್ಕಳಿಗೆ ಕೆಲಸ ಸಿಗದೇ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುವಂತ ಪರಿಸ್ಥಿತಿ ಬಂದಿದೆ. ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಕನ್ನಡ ಯುವಜನತೆಗೆ ಸರ್ಕಾರ ಉದ್ಯೋಗದ ಬದಲು ಚಿಪ್ಪು ಕೊಡಲು
ಮುಂದಾಗಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡನಾಡಲ್ಲಿ ಹೊರ ರಾಜ್ಯದವರ ಹಾವಳಿ ಹೆಚ್ಚಾಗಿದ್ದು ವಿವಿಧ ರೀತಿಯ ದಬ್ಬಾಳಿಕೆ ನಡೆಸುತ್ತಾ ಕನ್ನಡಿಗರಿಗೇ ಸೇರಬೇಕಾದ ಉದ್ಯೋಗ, ಉದ್ಯಮ, ಮಾರುಕಟ್ಟೆ ಹಾಗೂ ಕನ್ನಡನಾಡಿನ ಸಮಸ್ತ ಸಂಪತ್ತುಗಳನ್ನು ಲೂಟಿಹೊಡೆಯುತ್ತಿದ್ದಾರೆ. ಇನ್ನೊಂದು ಕಡೆ ಹಳ್ಳಿಗಳಲ್ಲೂ ಕೂಡ ಎಕ್ಕರೆಗಟ್ಟಲೆ ಜಮೀನನ್ನು ಖರೀದಿಸುತ್ತಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕವನ್ನೇ ಹೊರ ರಾಜ್ಯದವರು ಬಂದು ಆಳುವ ಪರಿಸ್ಥಿತಿ ಬರಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚೇತನ್ ಗೌಡ.ಎಂ, ಕರವೇ ಮಲ್ಲೇಶ್, ಸಿಂಹ ಘರ್ಜನೆ ಮಂಜುನಾಥ್, ಗಣಪತಿಪುರ ಮಂಜು, ಕೆ.ಆರ್. ಶಂಕರ್ ಗೌಡ, ಕೆ ಸಿ ಮೂರ್ತಿ, ಕನಕೇನಹಳ್ಳಿ ಕೃಷ್ಣಪ್ಪ, ಸಾಮ್ರಾಟ್ ಅರುಣ್, ಆನೇಕಲ್ ರೇಣುಕಾ, ತುಮಕೂರು ಅರುಣಾ, ಗೀತಾ ಗೌಡ, ಕೀರ್ತನ ಮಂಜುನಾಥ್, ಅಶ್ವತ ಮರೀಗೌಡ, ಪ್ರಸನ್ನ ಗೌಡ, ವಿಜಯ್ ಕುಮಾರ್, ಚೇತನ್ ಕನ್ನಡಿಗ, ಜಯನಗರ ಗಂಗಾಧರ್, ಚಿಕ್ಕಮರಾನಹಳ್ಳಿ ಅನಂತ್, ಅಭಿಗೌಡ, ಪೂಜಾಗಂಯ್ಯ ಸೇರಿದಂತೆ ಕನ್ನಡ ಪರ ಹೊರಟಗಾರರು ಭಾಗಿಯಾಗಿದರು.