ರಾಜ್ಯದಲ್ಲಿ ಜರುಗಿದ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷದ ಹುಮ್ಮನಸನ್ನು ಇಮ್ಮಡಿಗೊಳಿಸಿದೆ. ಜೊತೆ ಜೊತೆಗೆ ಸರ್ಕಾರದ ಭ್ರಷ್ಟಾಚಾರದ ಆರೋಪಗಳನ್ನು ಜನರು ಪಕ್ಕಕ್ಕೆ ಇರಿಸಿ ಮೂರು ಕ್ಷೇತ್ರದಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ. ಉಪಚುನಾವಣೆಗಳಲ್ಲಿ ಬಹುತೇಕ ಆಡಳಿತಾರೂಡ ಪಕ್ಷಕ್ಕೆ ಆಶೀರ್ವಾದ ನೀಡುತ್ತಾರೆ ಎನ್ನುವ ಮಾತನ್ನು ಮತದಾರ ನಿಜ ಮಾಡಿದ್ದಾನೆ ಈ ಮೂರು ಉಪಚುನಾವಣೆಯಲ್ಲಿ.
ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ತಂತ್ರಗಳನ್ನು ಹೆಣೆದ ಡಿ ಕೆ ಸಹೋದರರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾತಔರ ಕ್ಷೇತ್ರದಲ್ಲಿ ಆದ ಕಹಿ ಅನುಭವಕ್ಕೆ ಟಕ್ಕರ್ ಕೊಟ್ಟಿದ್ದಾರೆ. ಸಿ ಪಿ ಯೋಗೇಶ್ವರ್ ತಮ್ಮ ಸ್ಪರ್ಧೆಯನ್ನು ಕೊನೆಯ ಕ್ಷಣದವರೆಗೂ ಕಾಯ್ದಿಟ್ಟು ಅಂತಿಮವಾಗಿ ಕೈ ಗೆ ಮುತ್ತಿಟ್ಟರು. ಕೇಂದ್ರದಲ್ಲಿ ಸಚಿವರಾಗಿ ಕುಮಾರಸ್ವಾಮಿ ತಮ್ಮ ಪುತ್ರನಿಗೆ ಶತಾಯ ಗತಾಯ ಪಟ್ಟ ಕಟ್ಟಲು ಇಡೀ ಕುಟುಂಬ ಸಮೇತ ಚುನಾವಣಾ ಕಣದಲ್ಲಿ ಇಳಿದರು. ಅಜ್ಜ ಮಾಜಿ ಪ್ರಧಾನಿ ದೇವೆಗೌಡರೂ ಕೂಡಾ ಮೊಮ್ಮಗನನ್ನು ಶಾಸಕನನ್ನಾಗಿ ಮಾಡಲು ಇನ್ನಿಲ್ಲದ ತಂತ್ರಗಳನ್ನು ಬಳಸಿದರು.
ಆದರೆ ಮತದಾರ ಬೇರೆಯದೇ ಲೆಕ್ಕಾಚಾರ ಹಾಕಿದ್ದ. ಯಾಕೆಂದ್ರೆ ಸತತವಾಗಿ ಇಬ್ಬರು ಅಭ್ಯರ್ಥಿಗಳು (ಯೋಗೇಶ್ವರ್ ಹಾಗೂ ನಿಖಿಲ್) ಸತತವಾಗಿ ಎರಡು ಚುನಾ ವಣೆಗಳಲ್ಲಿ ಸೋತು ಸುಣ್ಣವಾಗಿದ್ದರು. ಯಾರೇ ಗೆದ್ದರೂ ಕೂದಲೆಳೆಯ ಅಂತರ ಎನ್ನುವ ಲೆಕ್ಕಾಚಾರ ಇತ್ತು.ಆದರೆ ಫಲಿತಾಂಶ ಇದಕ್ಕೆ ತದ್ವಿರುದ್ಧ ಎನ್ನುವಂತೆ 25000 ಕ್ಕೊ ಹೆಚ್ಚು ಮತಗಳ ಅಂತರದಿಂದ ಸಿ ಪಿ ಯೋಗೇಶ್ವರ್ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಸಂಡೂರು ಚುನಾವಣೆ ಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ. ಪತಿ ತುಕಾರಾಂ ಲೋಕಸಭಾ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದಾರೆ.
ಬಿ ಜೆ ಪಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಕೂಡಾ ತುಕಾರಾಂ ಉಪಜಾತಿಯ ವ್ಯಕ್ತಿಯಾಗಿದ್ದರಿಂದ ಗೆಲುವು ಸಾಧಿಸಬಹುದು ಎಂದುಕೊಂಡು ಪಕ್ಷದ ಅಧ್ಯಕ್ಷ ವಿಜಯೇಂದ್ರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದೆ. ಇಲ್ಲಿ ಯಾರೇ ಗೆದ್ದರೂ ಸೋತರೂ ಮತ್ತೊಂದು ದಾಖಲೆ ಎನ್ನುವಂತಾಗಿತ್ತು. ಯಾಕೆಂದರೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಬಿ ಜೆ ಪಿ ಒಮ್ಮೆಯೂ ಗೆದ್ದಿಲ್ಲ. ಒಮ್ಮೆ ಘೋರ್ಪಡೆ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಘೋರ್ಪಡೆ ಅವರು ಭೂಪತಿ ಎನ್ನುವ ಅನಾಮಧೇಯ ವ್ಯಕ್ತಿಯನ್ನು ತಂದು ನಿಲ್ಲಿಸಿ ಸಿ ಪಿ ಎಂ ಪಕ್ಷದಿಂದ ಗೆಲುವು ಸಾಧಿಸುವಂತೆ ಮಾಡಿದ್ದರು.
ಇನ್ನು ಜನಾರ್ಧನರೆಡ್ಡಿ ಮರುಪ್ರವೇಶ ಪಡೆದರೂ ಈ ಚುನಾವಣೆಯಲ್ಲಿ ಅಂತ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ.ಶಿಗ್ಗಾವಿ ಕ್ಷೇತ್ರದಲಿಯೂ ಕೂಡಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪುತ್ರನನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆ ಈ ಉಪಚುನಾವಣೆ ವಿಜಯೇಂದ್ರ ಪಾಲಿಗೆ ಎಚ್ಚರಿಕೆಯ ಗಂಟೆ.