ಬೆಂಗಳೂರು: ಇಂದು ಮಧ್ಯಾಹ್ನ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ- ಚುನಾವಣೆಯ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ
ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ರಾಜ್ಯದ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದು, ಇದೇ ವೇಳೆ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಿಸುವ ಸಾಧ್ಯತೆಯಿದೆ.
ಮಧ್ಯಾಹ್ನ 3.30ಕ್ಕೆ ನಡೆಯುವ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ನಿಗಧಿಪಡಿಸಿ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆಯಬೇಕಾಗಿದೆ. ಈ ಕ್ಷೇತ್ರಗಳಲ್ಲಿ ಶಾಸಕರಾಗಿದ್ದ ಮಾಜಿಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಈ.ತುಕಾರಾಂ ಅವರುಗಳು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಬೇಕಾಗಿದೆ.
ಈ ಮೂವರು ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ, ಸಂಸತ್ ಪ್ರವೇಶಿಸಿದ ಕಾರಣ ಚುನಾವಣೆ ಎದುರಾಗಲಿದೆ.ಈಗಾಗಲೇ ವಿಧಾನಸಭೆಯ ಶಾಸಕ ಸ್ಥಾನಕ್ಕೆ ಮೂವರಿಂದಲೂ ರಾಜೀನಾಮೆ ಸಲ್ಲಿಕೆಯಾಗಿದ್ದು, ಅಂಗೀಕಾರಗೊಂಡಿದೆ.ಶಾಸಕರ ರಾಜೀನಾಮೆಯಿಂದ ಯಾವುದೇ ಕ್ಷೇತ್ರ ತೆರವಾದ್ರೆ, ರಾಜೀನಾಮೆಯಾದ ಮುಂದಿನ 6 ತಿಂಗಳೊಳಗೆ ಆ ಕ್ಷೇತ್ರದ ಉಪ- ಚುನಾವಣೆ ನಡೆಸಬೇಕಾಗಿದ್ದು, ಮಧ್ಯಾಹ್ನ 3 ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ ದಿನಾಂಕವು ಘೋಷಣೆ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.