ಮೈಸೂರು: ನನ್ನ ಆತ್ಮಸಾಕ್ಷಿ ಪ್ರಕಾರ ನಾನು ನಡೆಯುತ್ತಿದ್ದೇನೆ, ಆತ್ಮಸಾಕ್ಷಿಗೆ ಅನುಗುಣವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ. ಎಲ್ಲಾ ನ್ಯಾಯಾಲಯ ಗಳಿಗಿಂತಲೂ ಆತ್ಮಸಾಕ್ಷಿಯ ನ್ಯಾಯಾಲಯ ದೊಡ್ಡದು ಎಂದು ಪುನರುಚ್ಛರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸತ್ಯಕ್ಕೆ ಯಾವಾಗಲೂ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.
ಇಂದು ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾಯಿತ ಸರ್ಕಾರ ವನ್ನು ಕಿತ್ತಾಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ರಾಜ್ಯದ ಜನರ ಆಶೀರ್ವಾದದಿಂದ ನಾವು 136 ಸ್ಥಾನ ಗೆದ್ದಿದ್ದೇವೆ. 5 ವರ್ಷಗಳ ಅಭಿವೃದ್ಧಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿ
ದ್ದೇವೆ. ದೇವರಾಜ ಅರಸು ಬಿಟ್ಟರೆ ಸಿಎಂ ಆಗಿ 5 ವರ್ಷ ಪೂರೈಸಿದ್ದು ಸಿದ್ದರಾಮಯ್ಯ ಮಾತ್ರ ಎಂದು ಹೇಳಿದ್ದಾರೆ.
ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ, ಅವರಿಗೆ ಸತ್ಯ ಗೊತ್ತಿದೆ. ಅದಕ್ಕೇ ಅವರು ಸತ್ಯ ಹೇಳಿದ್ದಾರೆ ಎಂದು ತಮ್ಮ ಮಾತಿಗೂ ಮುಂಚೆ ಮಾತನಾಡಿದ ಜಿ.ಟಿ.ದೇವೇಗೌಡರ ಮಾತಿಗೆ ಪ್ರತಿಕ್ರಿಯಿಸಿದರು.ಜನರ ಆಶೀರ್ವಾದ ಇರುವವರೆಗೂ ಯಾರು ಏನೂ ಮಾಡಲು ಆಗಲ್ಲ. ಜನರು ಹಾಗೂ ಚಾಮುಂಡಿ ಆಶೀರ್ವಾದಿಂದ 2ನೇ ಬಾರಿ ಸಿಎಂ ಆಗಿದ್ದೇನೆ ಎಂದರು.
ಮೈಸೂರು ದಸರಾ ಅಂದರೆ ಒಂದು ರೀತಿ ರೋಮಾಂಚನ ಮತ್ತು ಹರ್ಷ. ಕಳೆದ ಬಾರಿ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಿದ್ದೆವು. ಈ ಬಾರಿ ಅದ್ದೂರಿಯಾಗಿ ನಾಡಹಬ್ಬವಾಗಿ ಮೈಸೂರು ದಸರಾ ಆಚರಣೆಗೆ ನಿರ್ಧಾರ ಮಾಡಿದ್ದೇವೆ. ಈ ಬಾರಿ ರಾಜ್ಯದಲ್ಲಿ ಶೇ 98.99ರಷ್ಟು ಬಿತ್ತನೆ ಕಾರ್ಯ ಆಗಿದೆ. ನಮ್ಮ ನಿರೀಕ್ಷೆಗಿಂತ ಹೆಚ್ಚು ಬೆಳೆ ಬೆಳೆಯಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಈ ವರ್ಷ ಸಾಕಷ್ಟು ಮಳೆಯಾಗಿದೆ. ಎಲ್ಲ ನದಿಗಳು, ಜಲಾಶಯಗಳು ಬಹುತೇಕ ತುಂಬಿವೆ. ಮಳೆ ಬೆಳೆ ಸರಿಯಾಗಿ ಆದರೆ ಮಾತ್ರ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳಲು ಸಾಧ್ಯ. ರೈತರ ಮುಖದಲ್ಲಿ ಮಂದಹಾಸ ಕಾಣಲು ಸಾಧ್ಯ, ಸಾಮಾನ್ಯ ಜನತೆಗೆ ಸಂತೋಷ ಜೀವನ ಸಿಗಲಿ ಎಂದು ಚಾಮುಂಡಿ ದೇವಿಯನ್ನು ಪ್ರಾರ್ಥಿಸಿದ್ದೇನೆ ಎಂದರು.
ಇಂದು ಹಂಪ ನಾಗರಾಜಯ್ಯರಿಂದ ಮೈಸೂರು ದಸರಾ ಉದ್ಘಾಟನೆಯಾಗಿದೆ. ನನಗೆ ಮೈಸೂರು ದಸರಾ ಉದ್ಘಾಟಕರ ಆಯ್ಕೆ ಜವಾಬ್ದಾರಿ ಕೊಟ್ಟಿದ್ದರು. ಹಂಪ ನಾಗರಾಜಯ್ಯ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಹೀಗಾಗಿ ಅವರನ್ನು ಆಯ್ಕೆ ಮಾಡಿದೆವು ಎಂದರು.