ಮುಂಬೈ: ಎನ್ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು ತಮ್ಮ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅನ್ನು ಹೊಗಳಿದ್ದಾರೆ. ಬಿ.ಆರ್. ಅಂಬೇಡ್ಕರ್, ಶಾಹು ಮಹಾರಾಜ್, ಮಹಾತ್ಮ ಫುಲೆ ಮತ್ತು ಮೊದಲ ಮಹಾರಾಷ್ಟ್ರ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಸಿದ್ಧಾಂತದ ಬಗ್ಗೆ ಅಚಲ ಬದ್ಧತೆಯೊಂದಿಗೆ ಕಾರ್ಯಕರ್ತರ ನೆಲೆಯನ್ನು ನಿರ್ಮಿಸುವಂತೆ ಶರದ್ ಪವಾರ್ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಇಂದು ದಕ್ಷಿಣ ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಶರದ್ ಪವಾರ್, ನವೆಂಬರ್ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎಸ್ಪಿ) ಅನುಭವಿಸಿದ ತೀವ್ರ ಸೋಲಿನ ಬಗ್ಗೆಯೂ ಚಿಂತನೆ ನಡೆಸಿದರು.
ಈ ವೇಳೆ ಆರ್ಎಸ್ಎಸ್ ಅನ್ನು ಹೊಗಳಿರುವ ಶರದ್ ಪವಾರ್ ಅವರು ಆರ್ಎಸ್ಎಸ್ ತನ್ನ ಸಿದ್ಧಾಂತಕ್ಕೆ ಅಚಲ ನಿಷ್ಠೆಯನ್ನು ತೋರಿಸುವ ಮತ್ತು ಏನೇ ಬಂದರೂ ತಮ್ಮ ಮಾರ್ಗದಿಂದ ವಿಮುಖರಾಗದ ಬದ್ಧ ಕಾರ್ಯಕರ್ತರನ್ನು ಹೊಂದಿದೆ. ಅದೇ ರೀತಿಯ ಕೇಡರ್ ನಮಗೂ ಬೇಕು ಎಂದು ಹೇಳಿದ್ದಾರೆ.
ನವೆಂಬರ್ 2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಎನ್ಸಿಪಿ (ಎಸ್ಪಿ) ಸ್ಪರ್ಧಿಸಿದ ಒಟ್ಟು 86 ಸ್ಥಾನಗಳಲ್ಲಿ ಕೇವಲ 10 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಬಣವು ವಿಮರ್ಶಕರನ್ನು ಅಚ್ಚರಿಗೊಳಿಸಿತು. ಅದು ಸ್ಪರ್ಧಿಸಿದ ಒಟ್ಟು 59 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದಿತು.
ಮಹಾರಾಷ್ಟ್ರ ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಪಕ್ಷವು ಶೇ. 50ರಷ್ಟು ಟಿಕೆಟ್ಗಳನ್ನು ಹೊಸ ಮುಖಗಳಿಗೆ ಹಂಚಿಕೆ ಮಾಡಲಿದೆ ಎಂದು ಪವಾರ್ ಘೋಷಿಸಿದರು. ಪಕ್ಷವನ್ನು ಬಲಪಡಿಸಲು ಸಂಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.