ದೇಶದಲ್ಲಿನ ಪ್ರತಿಯೊಬ್ಬರಿಗೂ ಸಹ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ದೊರಕಿದಲ್ಲಿ ಈ ರೀತಿಯ ಜಾತಿ ಹೋರಾಟಗಳು ಖಂಡಿತ ನಿಲ್ಲುತ್ತದೆ. ಈ ರೀತಿಯ ಗುಣಮಟ್ಟದ ಶಿಕ್ಷಣ ಪೀಳಿಗೆ ಪೀಳಿಗೆಗಳಿಗೆ ಸಿಗದೇ ಮೇಲ್ವರ್ಗ ಹಾಗೂ ಕೆಲವರ್ಗಗಳ ಎಲ್ಲ ಜಾತಿ ಜನಾಂಗಗಳಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ.
ಸಂವಿಧಾನದ ಮೂಲ ಆಶಯಗಳಲ್ಲಿ ಒಂದಾಗಿರುವ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ,ಆರೋಗ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳು ದೊರಕುವಂತಾಗಬೇಕೆಂಬ ಮಹತ್ಕಾರ್ಯಗಳನ್ನು ಯಾವುದೇ ಪಕ್ಷಗಳು ಅಳವಡಿಸಿಕೊಳ್ಳದೆ ಕೇವಲ ಜಾತಿ ಜನಾಂಗಗಳ ಮೇಲೆ ವೋಟ್ ರಾಜಕಾರಣ ಮಾಡಿಕೊಂಡು ಬರುತ್ತಿರುವುದರ ಪರಾಕಾಷ್ಠೆಯನ್ನು ನಾವುಗಳು ಈ ರೀತಿಯ ಹೋರಾಟಗಳಲ್ಲಿ ಕಾಣಬಹುದು ಎಂದು ಆಮ್ ಆದ್ವಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯ ಪಟ್ಟರು.
ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಸಂವಿಧಾನದ ಮೂಲ ಆಶಯದಂತೆ ನಡೆದುಕೊಂಡಿರುವುದರ ಪರಿಣಾಮ ಆ ರಾಜ್ಯಗಳಲ್ಲಿ ಈ ರೀತಿಯ ಯಾವುದೇ ಜಾತಿ ಜನಾಂಗಗಳ ಹೋರಾಟಗಳು , ಕಲಹಗಳು ನಡೆಯುವುದೇ ಇಲ್ಲ.ಕರ್ನಾಟಕ ರಾಜ್ಯದ ರಾಜಕಾರಣಿಗಳಂತು ತಮ್ಮ ವೋಟ್ ರಾಜಕಾರಣವನ್ನು ಮುಂದುವರಿಸಲು ಸ್ವತಹ ಜಾತಿಯ ಮುಖವಾಡಗಳನ್ನು ಇಟ್ಟುಕೊಂಡು ತಾವೇ ಇಂತಹ ಹೋರಾಟಗಳ ನೇತೃತ್ವವನ್ನು ವಹಿಸಿಕೊಂಡಿರುತ್ತಾರೆ. ಅನೇಕ ದಶಕಗಳ ಕಾಲ ಈ ರಾಜಕಾರಣಿಗಳು ಅಧಿಕಾರದಲ್ಲಿದ್ದರೂ ಸಹ ತಮ್ಮ ತಮ್ಮ ಕ್ಷೇತ್ರದ ಶಾಲೆ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲಾಗದಷ್ಟು ಮೈ ಮರೆತು ಮಲಗಿರುವುದರ ಪರಿಣಾಮವೇ ಈ ರೀತಿಯ ಜಾತಿ ಹೋರಾಟಗಳು ನಡೆಯಲು ಪ್ರಮುಖ ಕಾರಣಗಳಾಗಿವೆ.
ಆಮ್ ಆದ್ಮಿ ಪಕ್ಷವು ರಾಜ್ಯದಲ್ಲಿ ನಡೆದಿರುವ 170 ಕೋಟಿ ರೂಗಳಷ್ಟು ಜನತೆಯ ತೆರಿಗೆ ಹಣವನ್ನು ವ್ಯಹಿಸಿ ನಡೆಸಿರುವ ಜಾತಿಗಣತಿಯ ವರದಿಯನ್ನು ಕೂಡಲೇ ಸದನದಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿದಲ್ಲಿ ಇಂತಹ ಹೋರಾಟಗಳಿಗೆ ಶಾಶ್ವತವಾಗಿ ಇತಿಶ್ರೀ ಆಡಬಹುದು.ಆದರೆ ರಾಜ್ಯದಲ್ಲಿ ಈ ಮೂರು ಜೆಸಿಬಿ ಪಕ್ಷಗಳು ಅಧಿಕಾರದಲ್ಲಿದ್ದರೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ವರದಿಯನ್ನು ಮುಚ್ಚಿಟ್ಟು ಸದಾಕಾಲ ಇಂತಹ ಜಾತಿ ಹೋರಾಟಗಳು, ಸಂಘರ್ಷಗಳು ಕಲಹಗಳು ನಡೆದಲ್ಲಿ ತಮ್ಮ ತಮ್ಮ ಪಕ್ಷಗಳ ವೋಟ್ ಬ್ಯಾಂಕನ್ನು ಹೆಚ್ಚಿಸಿಕೊಳ್ಳಬಹುದೆಂಬ ಕುಟಿಲ ನೀತಿಯಿಂದಾಗಿ ಈ ರೀತಿಯ ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವ ನೀತಿಯ ಘಟನೆಗಳು ಸಂದರ್ಭಗಳು ಮರುಕಳಿಸುತ್ತಲೆ ಇರುತ್ತವೆ.
ರಾಜ್ಯ ಸರ್ಕಾರವು ಯಾವುದೇ ಹೋರಾಟಗಾರರ ಮೇಲೆ ದಬ್ಬಾಳಿಕೆಯ ಹಾಗೂ ದಮನಕಾರಿ ನೀತಿಯನ್ನು ಖಂಡಿತ ಕೈಬಿಡಬೇಕು. ಅವರುಗಳ ಬೇಡಿಕೆಗಳಿಗೆ ನಮ್ಮ ಸಂವಿಧಾನದಲ್ಲಿಯೇ ಉತ್ತರ ಇರುವಾಗ ಅವೆಲ್ಲವುಗಳನ್ನು ಕುಳಿತು ಮಾತಾಡಿ ಬಗೆಹರಿಸಿಕೊಳ್ಳಬೇಕೆ ಹೊರತು, ಸರ್ಕಾರವೇ ಲಾಠಿಚಾರ್ಜ್ ನಂತಹ ಬಲಪ್ರಯೋಗಗಳನ್ನು ಮಾಡಿದ್ದಲ್ಲಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ಪಟ್ಟರು.