ಬೆಳಗಾವಿ: ಎಸ್ಎಂ ಕೃಷ್ಣ ಅವರು ನನ್ನನ್ನು ಮಗನ ರೀತಿ ನೋಡುತ್ತಿದ್ದರು. ರಾಜಕಾರಣದಲ್ಲಿ ಬೆಳೆಯಲು ಮಾರ್ಗದರ್ಶನ ನೀಡಿದವರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೇರೆಯವರಿಗೂ ನನಗೂ ಬಹಳ ವ್ಯತ್ಯಾಸವಿದೆ. ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು.
ಇವತ್ತು ಬೆಳಗ್ಗೆ 3 ಗಂಟೆಗೆ ಪುತ್ರಿ ಕರೆ ಮಾಡಿ ವಿಚಾರ ತಿಳಿಸಿದಳು. ನಮ್ಮ ಕುಟುಂಬಕ್ಕೆ ಇದು ದೊಡ್ಡ ಆಘಾತ. ನಾನು ಅವರ ಕುಟಂಬದ ಒಬ್ಬ ಸದಸ್ಯ. ರಾಜಕಾರಣದಲ್ಲಿ ನಾನು ಬೆಳೆದಿದ್ದು, ಅವರು ನನ್ನನ್ನು ಬೆಳೆಸಿದ್ದು ದೊಡ್ಡ ಇತಿಹಾಸವಿದೆ ಎಂದರು.
ನನ್ನ ರಾಜಕಾರಣದ ಮೊದಲ ಗುರು. ಅವರ ಮತ್ತು ನನ್ನ ಒಡನಾಟದ ಇತಿಹಾಸವನ್ನು ಈಗ ನಾನು ಹೇಳುವುದಿಲ್ಲ. ನಾನು ಏನಾದ್ರೂ ತಪ್ಪು ಮಾಡಿದರೆ ಬಹಳ ನೊಂದು ಮಾತನಾಡುತ್ತಿದ್ದರು ಎಂದು ತಿಳಿಸಿದರು.
ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿರುವ (KPCC Office) ಭಾರತ್ ಜೋಡೋ ಸಭಾಂಗಣದಲ್ಲಿ ಪಕ್ಷದ ವತಿಯಿಂದ ಕೃಷ್ಣ ಅವರಿಗೆ ನಮನ ಸಲ್ಲಿಸಲಾಗುವುದು. ಮೆಟ್ರೋ, ವಿಮಾನ ನಿಲ್ದಾಣವನ್ನು ತಂದವರು ಅವರು. ಅವರ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ ಮೆಚ್ಚುಗೆ ಮಾತೇ ಸಾಕು ಎಂದು ಕಂಬನಿ ಮಿಡಿದರು.