ಮೈಸೂರು: ಮೈಸೂರಿನ ಕಾರಾಗೃಹದಲ್ಲಿ ಎಸ್ಸೆನ್ಸ್ ಕುಡಿದಿದ್ದ ಖೈದಿಗಳ ಪೈಕಿ ಮತ್ತಿಬ್ಬರು ಖೈದಿಗಳು ಇಂದು ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಮಾದೇಶ ಎಂಬ ಖೈದಿ ಎಸ್ಸೆನ್ಸ್ ಕುಡಿದು ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿದ್ದ. ಇಂದು ಸಹ ಚಾಮರಾಜನಗರ ಮೂಲದವನು ಎನ್ನಲಾದ ನಾಗರಾಜ್ ಹಾಗೂ ರಮೇಶ್ ಎಂಬಾತ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಡಿಸೆಂಬರ್ 28ರಂದು ಹೊಸ ವರ್ಷ ಆಚರಣೆ ಮಾಡಲು ಕೇಕ್ ತಯಾರಿಕೆ ಮಾಡಲು ಎಸ್ಸೆನ್ಸ್ ಖರೀದಿಸಿ ತರಲಾಯಿತು. ಜೈಲಿನಲ್ಲಿ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೈದಿಗಳಾದ ಮೂವರು ನಶೆ ಬರಲು ಎಸ್ಸೆನ್ಸ್ ಕುಡಿದಿದ್ದರು. ಕೂಡಲೇ ಅಸ್ವಸ್ಥರಾದವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ನಿನ್ನೆ ಓರ್ವ ಹಾಗೂ ಇಂದು ಇಬ್ಬರು ಮೃತಪಟ್ಟಿದ್ದಾರೆ.