ಮಂಡ್ಯ: ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಮಂಗಲ ಟಿ. ಸತೀಶ್ ಜವರೇಗೌಡ (ಸಜಗೌ) ಅವರು ಸಾಂಸ್ಕೃತಿಕ ಸಂಘಟನೆ, ಸಾಹಿತ್ಯ ಪರಿಚಾರಿಕೆ ಮತ್ತು ಕೃಷಿಯಲ್ಲಿ ಮಾಡಿರುವ ಸಾಧನೆಗಾಗಿ ರಾಜ್ಯ ಮಟ್ಟದ ‘ಏಕಲವ್ಯ ಪ್ರಶಸ್ತಿ’ಗೆ ಆಯ್ಕೆ ಆಗಿದ್ದಾರೆ ಎಂದು ಏಕಲವ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎನ್. ಚೇತನ್ ರಾಜ್ ತಿಳಿಸಿದ್ದಾರೆ.ದಾವಣಗೆರೆ ಜಿಲ್ಲೆಯ ಏಕಲವ್ಯ ಸಾಂಸ್ಕೃತಿಕ ಕಲಾ ಸಂಘ ಹಾಗೂ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿದ್ದು,
ಸತೀಶ್ ಜವರೇಗೌಡ ಅವರು ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಸಂಘಟನೆಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆ ಸೃಜನಶೀಲ ಕವಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಮೌಲ್ಯಯುತವಾದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಈ ‘ಏಕಲವ್ಯ ಪ್ರಶಸ್ತಿ’ಯನ್ನು ನೀಡಲಾಗುತ್ತಿದೆ.
ಡಿ. 5 ರಂದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯ ಬಸಮ್ಮ ಕಲಾ ಮಂದಿರದಲ್ಲಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷರಾದ ಎಂ.ಪಿ. ವೀಣಾ ಮಹಾಂತೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಶೋಧನಾಧಿಕಾರಿ ಡಾ.ಎಸ್.ಜಿ. ಬಸವರಾಜ್ ಹಾಗೂ ಬಂಜಾರ ಭಾಷಾ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾದ ಡಾ. ಉತ್ತಮ್ ಮೂಡ್ ಅವರು ಸತೀಶ್ ಜವರೇಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು.