ಬೆಂಗಳೂರು: ಬಾಕಿ ಹಣ ಪಾವತಿ ಆಗದೇ ಇರುವುದು ಸೇರಿದಂತೆ ಗುತ್ತಿಗೆದಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಗುತ್ತಿಗೆದಾರರ ಸಂಘವು ಏಳು ಸಚಿವರಿಗೆ ಪತ್ರ ಬರೆದಿದೆ. ಅಧಿಕಾರಿಗಳು ಹಾಗೂ ಸಚಿವರ ವರ್ತನೆ ಬಗ್ಗೆ ಈ ಪತ್ರದಲ್ಲಿ ಅಸಮಾಧಾನ ತೋಡಿಕೊಳ್ಳಲಾಗಿದೆ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದೂ ಈ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್ ಸಿ ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಎನ್ ಎಸ್ ಬೋಸರಾಜು, ದಿನೇಶ್ ಗುಂಡೂರಾವ್ ಮತ್ತು ರಹೀಂ ಖಾನ್ ಅವರಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದಿಂದ ಗುತ್ತಿಗೆದಾರರಿಗೆ ಸಾಕಷ್ಟು ಹಣ ಪಾವತಿ ಬಾಕಿ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಕೇಳಿದರೂ ಸ್ಪಂದನೆ ಇಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ಬಾಕಿ ಕೇಳಿದರೆ ಸಚಿವರನ್ನು ಭೇಟಿಯಾಗಿ ಎನ್ನುತ್ತಾರೆ. ಯಾವುದೇ ಸಮಸ್ಯೆಗೂ ಅವರು ಸ್ಪಂದಿಸುವುದಿಲ್ಲ. ಸಚಿವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಗುತ್ತಿಗೆದಾರರ ಸಂಘವು ತನ್ನ ಪತ್ರದಲ್ಲಿ ಅಸಮಾಧಾನ ಹೊರಹಾಕಿದೆ.
ಈ ಸರ್ಕಾರಕ್ಕೆ ಗುತ್ತಿಗೆದಾರರ ಸಂಕಷ್ಟದ ಬಗ್ಗೆ ಸ್ವಲ್ಪವೂ ಕರುಣೆ ಹೊಂದಿಲ್ಲ ಎಂದನಿಸುತ್ತದೆ. ಈ ರೀತಿ ನಮ್ಮನ್ನು ಕಡೆಗಣಿಸುತ್ತೀರಿ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಈ ಪತ್ರ ತಲುಪಿ ಏಳು ದಿನದೊಳಗೆ ಗುತ್ತಿಗೆದಾರರ ಸಭೆ ಕರೆದು ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ಸಂಘವು ಎಚ್ಚರಿಕೆ ನೀಡಿದೆ.
ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಇದೇ ಪತ್ರದಲ್ಲಿ ನೀಡಲಾಗಿದೆ. ‘ಹಿಂದಿನ ಸರ್ಕಾರದ ವಿರುದ್ಧ ಗುತ್ತಿಗೆದಾರರು ಹೋರಾಟ ಮಾಡಿರುವುದು ತಮಗೆ ತಿಳಿದಿದೆ. ತಮ್ಮ ಮನವಿಗೆ ಸರಿಯಾಗಿ ಸ್ಪಂದಿಸದಿದ್ದರೆ ಮುಂದೆ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದ್ದೇವೆ. ಆದಷ್ಟೂ ಬೇಗನೆ ಈ ಸಮಸ್ಯೆಗೆ ಪರಿಹಾರ ಹುಡುಕಲು ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.