ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯಲ್ಲಿ ಭಾರತ ತಂಡದ ಎಲ್ಲಾ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯುವ ಸಂಭವನೀಯತೆ ಮತ್ತಷ್ಟು ದಟ್ಟವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು, ಭಾರತ ತಂಡದ ಎಲ್ಲಾ ಪಂದ್ಯಾವಳಿಗಾಗಿ ಯುಎಇಯನ್ನು ತಟಸ್ಥ ಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳಲು ಸಜ್ಜಾಗಿದೆ.
ಎಂದು ಇಎಸ್ಪಿಎನ್ಕ್ರಿಕ್ಇನ್ಫೋ ವರದಿ ಮಾಡಿದೆ. ಫೆಬ್ರವರಿ 23, 2025ರಂದು ಭಾರತ-ಪಾಕಿಸ್ತಾನ ನಡುವೆ ಮೊದಲ ಪಂದ್ಯ ನಡೆಯಲಿದೆ ಎಂದೂ ಸ್ಪಷ್ಟಪಡಿಸಲಾಗಿದೆ.ಜಯ್ ಶಾ ಅಧ್ಯಕ್ಷತೆಯಲ್ಲಿ ಕೈಗೊಂಡ ಮೊದಲ ಪ್ರಮುಖ ನಿರ್ಧಾರದಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂತಿಮವಾಗಿ ಚಾಂಪಿಯನ್ಸ್ ಟ್ರೋಫಿ 2025ರ ಹೋಸ್ಟಿಂಗ್ ಹಕ್ಕುಗಳ ಸಮಸ್ಯೆಯನ್ನು ಬಗೆಹರಿಸಿದೆ.
ಅದರಂತೆ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸಲಾಗುವುದಾದರೂ, ಭಾರತದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅಲ್ಲದೇ ಭಾರತ ಅಥವಾ ಪಾಕಿಸ್ತಾನದಲ್ಲಿ ನಡೆಯಲಿರುವ 2024-27ರ ಅವಧಿಯ ಎಲ್ಲಾ ಐಸಿಸಿ ಪಂದ್ಯಾವಳಿಗಳಿಗೆ ಹೈಬ್ರಿಡ್ ಮಾದರಿಯನ್ನು ಅನುಸರಿಸಲು ಒಪ್ಪಿಗೆ ಸೂಚಿಸಲಾಗಿದೆ.
ಇನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಬಹು ನಿರೀಕ್ಷಿತ ಸ್ಪರ್ಧೆಯು ಫೆಬ್ರವರಿ 23, 2025 (ಭಾನುವಾರ) ರಂದು ನಡೆಯಲಿದೆ. ಪಾಕಿಸ್ತಾನವನ್ನು ಹೊರತುಪಡಿಸಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳು ಈ ಗುಂಪಿನಲ್ಲಿ ಭಾರತದ ಪ್ರತಿಸ್ಪರ್ಧಿಗಳಾಗಿವೆ. ಭಾರತ ಫೆಬ್ರವರಿ 20, 2025ರಂದು ಬಾಂಗ್ಲಾದೇಶ ಮತ್ತು ಮಾರ್ಚ್ 2, 2025ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದ್ದು, ಈ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆಯಿದೆ.
ಎರಡು ಸೆಮಿಫೈನಲ್ಗಳು ಕ್ರಮವಾಗಿ ಮಾರ್ಚ್ 4, 2025 ಮತ್ತು ಮಾರ್ಚ್ 5, 2025ರಂದು ನಡೆಯಲಿದ್ದು, ಮಾರ್ಚ್ 9ರಂದು ನಿಗದಿಪಡಿಸಲಾದ ಫೈನಲ್ಗೆ ಮೀಸಲು ದಿನದ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಭಾರತ ತಂಡ ಫೈನಲ್ಗೆ ಅರ್ಹತೆ ಗಳಿಸಿದರೆ, ಫೈನಲ್ ಪಂದ್ಯ ಕೂಡ ಯುಎಇಯಲ್ಲೇ ನಡೆಯಲಿದೆ. ಅಲ್ಲದೇ ಪ್ರಶಸ್ತಿ ಘೋಷಣೆ ಸಮಾರಂಭ ಕೂಡ ಅಲ್ಲೇ ನಡೆಯಲಿದೆ. ಒಂದು ವೇಳೆ ಭಾರತ ಸೆಮಿಫೈನಲ್ ಮತ್ತು ಫೈನಲ್ ತಲುಪುವಲ್ಲಿ ವಿಫಲವಾದರೆ, ಈ ಎಲ್ಲಾ ಈವೆಂಟ್ಗಳನ್ನು ಪಾಕಿಸ್ತಾನದಲ್ಲೇ ನಡೆಸಲಾಗುವುದು.