ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದ ಚುನಾವಣಾ ಸುಧಾರಣೆಯ ಮಸೂದೆ ಕುರಿತು ಚರ್ಚಿಸಲು ಜನವರಿ 8 ರಂದು 39 ಸದಸ್ಯರ ಮೊದಲ ಜಂಟಿ ಸಂಸದೀಯ ಸಮಿತಿಯ ಸಭೆ ನಡೆಯಲಿದೆ.
ಬಿಜೆಪಿ ಸದಸ್ಯ ಪಿ ಪಿ ಚೌಧರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಧಿಕಾರಿಗಳು ಮಸೂದೆ ಕುರಿತು ವಿವರ ನೀಡಲಿದ್ದಾರೆ.
ಸಂವಿಧಾನ (129 ನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಕಳೆದ ವಾರ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸಂಸತ್ತಿನ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿತ್ತು.
ಏಕಕಾಲದಲ್ಲಿ ಚುನಾವಣೆ ನಡೆಸುವ ಎರಡು ಕರಡು ಶಾಸನಗಳನ್ನು ಪರಿಶೀಲಿಸುವ ಭಾಗವಾಗಲು ಹೆಚ್ಚಿನ ರಾಜಕೀಯ ಪಕ್ಷಗಳು ಇಚ್ಛೆ ವ್ಯಕ್ತಪಡಿಸಿದ್ದರಿಂದ ಸಮಿತಿಯ ಸದಸ್ಯರ ಸಂಖ್ಯೆಯನ್ನು 31 ರಿಂದ 39 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು.