ಮುಡಾ ಅಕ್ರಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿದ ಸರ್ಕಾರವನ್ನು ಒಂದೇ ಕಲ್ಲಿನಲ್ಲಿಂದ ಸಿಎಂ ಸಿದ್ದರಾಮಯ್ಯ ಪಾರು ಮಾಡಿದ್ದಾರೆ. ಅಧಿವೇಶನದ ಅವಧಿಯಲ್ಲಿ ನೇರವಾಗಿ, ಸರ್ಕಾರವನ್ನು ಎರಡು ಪ್ರಮುಖ ಹಗರಣಗಳಿಂದ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದ ವಿಪಕ್ಷಗಳಿಗೆ ಚಳ್ಳೇ ಹಣ್ಣನ್ನು ಸಿಎಂ ಸಿದ್ದರಾಮಯ್ಯ ತಿನ್ನಿಸಿದ್ದಾರೆ.
ಅಧಿವೇಶನ ಆರಂಭಕ್ಕೂ ಮುನ್ನವೇ ಸರ್ಕಾರದ ವಿರುದ್ಧ ಮುಗಿಬಿದ್ದು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದ ವಿಪಕ್ಷಗಳ ನಡೆಗೆ ಒಂದೇ ಕಲ್ಲನ್ನು ಬಳಸಿ ಸಿಎಂ ಸಿದ್ದರಾಮಯ್ಯ ಎಲ್ಲಾ ವಿಚಾರಗಳನ್ನು ತಣ್ಣಗಾಗಿಸಿದ್ದಾರೆ.ಅಷ್ಟಕ್ಕೂ ಏನಿದು ಕಲ್ಲು? ಏನಿದು ಹಗರಣ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಈ ಹಿಂದೆ ರಾಜ್ಯ ಕಂಡು ಕೇಳರಿಯದ ಹಗರಣ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ವಿಪಕ್ಷಗಳಿಗೆ ಸದನದ ಆರಂಭದ ಹಿಂದಿನ ದಿನ ತಡರಾತ್ರಿ ನಿವೃತ್ತ ನ್ಯಾಯಾಧೀಶರ ಏಕಸದಸ್ಯ ಆಯೋಗ ರಚನೆ ಮಾಡುವ ಮೂಲಕ ಮುಂದಿನ 6 ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿದ್ದು, ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದುಕೊಂಡಿದ್ದನ್ನು ತಣ್ಣಗಾಗಿಸಿದ್ದಾರೆ.
ಸದ್ಯ ಸದನದಲ್ಲಿ ಮುಡಾ ಅಕ್ರಮದ ವಿಚಾರ ವಿಪಕ್ಷ ಪ್ರಸ್ತಾಪ ಮಾಡಿದ್ರೂ, ಈಗಾಗಲೇ ಸರ್ಕಾರ ಆಯೋಗ ರಚನೆ ಮಾಡಿದೆ. ನಿವೃತ್ತ ನ್ಯಾಯಾಧೀಶರ ಏಕಸದಸ್ಯ ಆಯೋಗ ಮೊದಲು ವರದಿ ನೀಡಲಿ. ಬಳಿಕ ಅದರ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಲಿದ್ದಾರೆ. ಈ ಮೂಲಕ ಮೊದಲ ಹಗರಣಕ್ಕೆ ಸಿಎಂ ಸಿದ್ದರಾಮಯ್ಯ ಇತಿಶ್ರೀ ಹಾಡಿದ್ದಾರೆ.
ಇನ್ನು ಎರಡನೇ ಅತಿ ದೊಡ್ಡ ಪ್ರಕರಣ ಅಂದರೆ ಅದು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ಅವ್ಯವಹಾರ ಹಗರಣ. ಈಗಾಗಲೇ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರರ ತಲೆದಂಡವಾಗಿದ್ದು, ಸದ್ಯ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಬ್ಯಾಂಕ್ ಕೂಡ ರಿಸರ್ವ್ ಬ್ಯಾಂಕ್ನ ಸೂಚನೆಯ ಮೇರೆಗೆ ಕೋಟಿ ಕೋಟಿ ಹಣ ವರ್ಗಾವಣೆ ಮಾಡಿದ್ದರ ಉಲ್ಲೇಖದ ಆಧಾರದ ಮೇಲೆ, ಹಗರಣದಲ್ಲಿ ಸಿಬಿಐ ಮತ್ತು ಇಡಿ ಎಂಟ್ರಿ ಕೊಟ್ಟಿದೆ.
ಈ ಮೂಲಕ ರಾಜ್ಯ ಸರ್ಕಾರ ವಿಪಕ್ಷ ಒಂದು ವೇಳೆ ಮುಡಾ ಅಕ್ರಮ ಪ್ರಸ್ತಾಪ ಮಾಡಿದರೆ, ಆಯೋಗ ಬಗ್ಗೆ ಉತ್ತರ. ವಾಲ್ಮೀಕಿ ಹಗರಣದ ಬಗ್ಗೆ ಮಾತನ್ನಾಡಿದರೆ, ಸಿಬಿಐ ಹಾಗೂ ಇಡಿ ಎರಡು ಕೂಡ ಕೇಂದ್ರ ಸರ್ಕಾರದ ಸ್ವಾಮ್ಯದ ಇಲಾಖೆ. ಇವರೇ ವರದಿ ನೀಡಬೇಕೆಂದು ಉತ್ತರಿಸಲಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಸಿಎಂ ಸಿದ್ದರಾಮಯ್ಯ ಹೊಡೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.



