ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ನಿಂದಾಗಿ ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ದಿನವಾದ ಶುಕ್ರವಾರ ಆತಿಥೇಯ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ. ಏತನ್ಮಧ್ಯೆ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಒಂದೇ ವರ್ಷದಲ್ಲಿ 50 ವಿಕೆಟ್ ಪಡೆಯುವ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.
ಈ ಹಿಂದೆ ಭಾರತೀಯ ಕ್ರಿಕೆಟ್ ನ ದಂತಕತೆ ಕಪಿಲ್ ದೇವ್ ಮತ್ತು ಎಡಗೈ ವೇಗಿ ಜಹೀರ್ ಖಾನ್ ಅವರು ಈ ಸಾಧನೆ ಮೆರೆದಿದ್ದರು. ಕಪಿಲ್ ದೇವ್ ಅವರು 2 ಬಾರಿ ಈ ಸಾಧನೆ ಮಾಡಿದ್ದರು. ಇದೀಗ ಜಸ್ಪ್ರೀತ್ ಬುಮ್ರಾ ಅವರು ಈ ಸಾಧನೆ ಮಾಡಿದ ಮೂರನೇ ಬೌಲರ್ ಆಗಿದ್ದಾರೆ.ಆಸ್ಪ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಅವರ ವಿಕೆಟ್ ಒಡೆಯುತ್ತಲೇ ಬುಮ್ರಾ ವಿನೂತನ ಮೈಲಿಗಲ್ಲು ಸ್ಥಾಪಿಸಿದರು. ಒಂದು ವರ್ಷದಲ್ಲಿ 50 ವಿಕೆಟ್ಗಳನ್ನು ಅವರು ಪಡೆದುಕೊಂಡಿದ್ದಾರೆ.
ಭಾರತ 180ಕ್ಕೆ ಆಲೌಟ್: ಅಡಿಲೇಡ್ ಓವಲ್ ಮೈದಾನದಲ್ಲಿ ಶುಕ್ರವಾರ ಶುರುವಾದ ಬಾರ್ಡರ್ ಗವಾಸ್ಕರ್ ಟ್ರೋಫಿ ಎರಡನೇ ಟೆಸ್ಟ್ನ ಮೊದಲನೇ ಇನಿಂಗ್ಸ್ನಲ್ಲಿ ಭಾರತವನ್ನು ಸಾಧಾರಣ 180 ರನ್ಗಳಿಗೆ ಕಟ್ಟಿ ಹಾಕಿ ಆಸೀಸ್ ಮೇಲುಗೈ ಸಾಧಿಸಿದೆ. ಆಸೀಸ್ ಬೌಲರ್ಗಳೆದುರು ಉತ್ತಮ ಹೋರಾಟ ತೋರಿದ ಭಾರತದ ನಿತೀಶ್ ಕುಮಾರ್ ರೆಡ್ಡಿ(42) ಮತ್ತು ಪಂಚ ವಿಕೆಟ್ ಸಾಧನೆಗೈದ ಆಸ್ಪ್ರೇಲಿ ಯಾದ ಮಿಚೆಲ್ ಸ್ಟಾರ್ಕ್ ಪಿಂಕ್ ಬಾಲ್ ಟೆಸ್ಟ್ ನ ಮೊದಲ ದಿನದಾಟದ ಗೌರವಕ್ಕೆ ಪಾತ್ರರಾದರು.