2 ಬಾರಿಯ ಒಲಿಂಪಿಕ್ ಚಾಂಪಿಯನ್, ಮಾಜಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಿಗೆ ಹೈದರಾಬಾದ್ ಮೂಲದ ವೆಂಕಟ ಸಾಯಿ ದತ್ತ ಎಂಬವರ ಜೊತೆ ಮದುವೆ ನಿಶ್ಚಯವಾಗಿದೆ. ಡಿಸೆಂಬರ್ 22ರಂದು ಉದಯಪುರದಲ್ಲಿ ವಿವಾಹ ನೆರವೇರಲಿದೆ.
ವೆಂಕಟ ದತ್ತ ಸಾಯಿ ಅವರು ಪಾಸಿಡೆಕ್ಸ್ ಟೆಕ್ನಾಲಜೀಸ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಪಿವಿ ಸಿಂಧು ಅವರು ಲಖನೌನಲ್ಲಿ ಸಯ್ಯದ್ ಮೋದಿ ಇಂಟರ್ ನ್ಯಾಶನಲ್ ಟೂರ್ನಿ ಯಲ್ಲಿ ಗೆದ್ದ ಬೆನ್ನಲ್ಲೇ ಈ ಸಂಗತಿಯನ್ನು ಅವರ ಕುಟುಂಬ ಬಹಿರಂಗಪಡಿಸಿದೆ.ತಿಂಗಳ ಹಿಂದೆ ನಿಶ್ಚಯವಾಗಿತ್ತು: ಈ ಬಗ್ಗೆ ಸುದ್ದಿಮೂಲದೊಂದಿಗೆ ಮಾತನಾಡಿರುವ ಪಿವಿ ಸಿಂಧು ಅವರ ತಂದೆ ಪಿವಿ ರಮಣ, “ಎರಡೂ ಕುಟುಂಬಗಳು ಹಿಂದಿನಿಂದಲೂ ಆತ್ಮೀಯವಾಗಿದ್ದು ಮದುವೆ ಮಾತುಕತೆಗಳು ಮಾತ್ರ ತಿಂಗಳ ಹಿಂದೆ ಅಂತಿಮಗೊಂಡಿವೆ ಎಂದು ಹೇಳಲಾಗಿದೆ.
ಜನವರಿಯ ಬಳಿಕ ಸಿಂಧು ಅವರು ಬಿಝಿ ಶೆಡ್ಯುಲ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಇದೀಗ ವಿವಾಹ ಮಹೋತ್ಸವ ನೆರವೇರಿಸಲು ಸಮಯ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.ಡಿಸೆಂಬರ್ 20ರಿಂದಲೇ ವಿವಾಹ ಸಂಬಂಧಿ ಕಾರ್ಯಕ್ರಮಗಳು ಶುರುವಾಗಲಿವೆ. 22ರಂದು ಉದಯಪುರದಲ್ಲಿ ವಿವಾಹ ನೆರವೇರಲಿದ್ದು ಬಳಿಕ 24ರಂದು ಹೈದರಾಬಾದ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮುಂದಿನ ಸೀಸನ್ ಬಹಳ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಜನವರಿಯಲ್ಲೇ ಸಿಂಧು ಅವರು ತರಬೇತಿಗೆ ತೆರಳಲಿದ್ದಾರೆ.
ಪಿವಿ ಸಿಂಧು ಅವರ ಸಾಧನೆ: ಪಿವಿ ಸಿಂಧು ಅವರು ಭಾರತ ಕಂಡ ಅತ್ಯುತ್ತಮ ಶಟ್ಲರ್ ಆಗಿದ್ದಾರೆ. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅವರು 2019ರಲ್ಲಿ ಚಿನ್ನವೂ ಸೇರಿದಂತೆ ಒಟ್ಟು 5 ಬಾರಿ ಪದಕ ಗೆದ್ದಿದ್ದಾರೆ. ಇನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದು ಬಾರಿ ಬೆಳ್ಳಿ ಪದಕ ಮತ್ತು ಮತ್ತೊಂದು ಬಾರಿ ಕಂಚಿನ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಭಾರತದ ಪರ ನಿರಂತರ ಒಲಿಂಪಿಕ್ಸ್ ಪದಕ ಪಡೆದ ಸಾಧನೆ ಸಹ ಸಿಂಧು ಅವರ ಹೆಸರಿನಲ್ಲಿ ಇದೆ. 2016ರ ರಿಯೋ ಒಲಿಂಪಿಕ್ಸ್ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅವರು ಪದಕ ಬಾಚಿದ್ದಾರೆ. ಇನ್ನು ವಿಶ್ವ ಶಟಲ್ ಬ್ಯಾಡ್ಮಿಂಟನ್ ರ್ಯಾಂಕಿಂಗ್ ನಲ್ಲಿ ಅವರು 2017ರಲ್ಲಿ ತಮ್ಮ ಜೀವನಶ್ರೇಷ್ಠ 2ನೇ ಶ್ರೇಯಾಂಕದವರೆಗೆ ಏರಿದ್ದರು.