ಪೀಣ್ಯ,ದಾಸರಹಳ್ಳಿ: ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಸುಪ್ರೀಂ ಕೋರ್ಟ್ ಆದೇಶದಂತೆ ವಿಳಂಬ ಮಾಡದೇ ಒಳ ಮೀಸಲಾತಿ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಬಹುಜನ ಚಳುವಳಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪ ಹಾಗೂ ವಿಶ್ವ ಆದಿ ಜಾಂಬವ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಭೀಮರಾಜ್ ರವರ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಬಹುಜನ ಚಳುವಳಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪ, ‘ಸುಪ್ರೀಮ್ ಕೋರ್ಟ್ ನ ಸ್ಪಷ್ಟ ಆದೇಶವಿದ್ದರೂ ಪ್ರಸ್ತುತ ರಾಜ್ಯ ಸರ್ಕಾರವು ಒಳಮೀಸಲಾತಿಯ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದು ಶೋಷಿತ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿಯುವಂತಾಗಿದೆ. ಆದ್ದರಿಂದ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಉಗ್ರ ರೂಪ ಪಡೆಯಲಿದೆ’, ಎಂದು ಹೇಳಿದರು.
ವಿಶ್ವ ಆದಿ ಜಾಂಬವ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಭೀಮರಾಜ್ ಮಾತನಾಡಿ, ‘ನಮ್ಮ ಸಮುದಾಯವು ಮೀಸಲಾತಿಯ ಸೌಲಭ್ಯಗಳ ಹಂಚಿಕೆಯಲ್ಲಾದ ತಾರತಮ್ಯದಿಂದ ಮೂಲ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಬಲಾಢ್ಯರ ಒತ್ತಡಕ್ಕೆ ಮಣಿದು ಒಳ ಮೀಸಲಾತಿ ಜಾರಿ ಮಾಡದೇ ಅನ್ಯಾಯವೆಸಗುತ್ತಿದ್ದಾರೆ. ಸದಾಶಿವ ವರದಿಯನ್ನು ಜಾರಿ ಮಾಡಿಯೇ ತೀರಬೇಕು’, ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬಹುಜನ ಚಳುವಳಿ ಮುಖಂಡರಾದ ವಿಜಯ್ ಕುಮಾರ್, ನಾಗೇಶ್, ಸೊಂಡೆಕೊಪ್ಪ ಪ್ರಕಾಶ್, ವಿಶ್ವ ಆದಿ ಜಾಂಬವ ಮಹಾಸಭಾದ ಮುಖಂಡರಾದ ಅಮರ್ ನಾರಾಯಣ್, ಎಂ.ಮುನಿರಾಜುಮೂರ್ತಿ ಎನ್. ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮುಖಂಡರಾದ ಗೋವಿಂದರಾಜು, ಆನಂದ್, ಮಂಜೇಶ್, ದಲಿತ ಮುಖಂಡರಾದ ಲಿಂಗನಹಳ್ಳಿ ವೆಂಕಟೇಶ್, ಮಹಿಳಾ ಮುಖಂಡರಾದ ನಾಗಮಣಿ, ನಾಗರಾಜು,ದಲಿತ ಸಂಘರ್ಷ ಸಮಿತಿ ಡಾ. ಎನ್ ಮೂರ್ತಿ ಬಣ ಮುಖಂಡರು ಸೇರಿದಂತೆ ಹಲವಾರು ದಲಿತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.