ಬೆಂಗಳೂರು: ನಗರದ ಪಂಚಾಮೃತ ಸುಗಮ ಸಂಗೀತ ಅಕಾಡಮಿಯ ವತಿಯಿಂದ ರಜತ ವರ್ಷಾಚರಣೆಯ ಅಂಗವಾಗಿ “ಭಗವದ್ಗೀತೆ ಕಾವ್ಯ ಗೀತಗಾಯನ” ಕಾರ್ಯಕ್ರಮವು ಮಲ್ಲೇಶ್ವರದ ವಿಮಲ ಸಂಸ್ಕೃತಿ ಸದನದಲ್ಲಿ ಯಶಸ್ವಿಯಾಗಿ ನಡೆಯಿತು.
18 ತಿಂಗಳು ನಡೆದ ಗೀತೆಯ ಸರಣಿಯ ಸಮಾರೋಪವಾಗಿ ಈ ಕಾರ್ಯಕ್ರಮವುಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ “ಭಗವದ್ಗೀತೆ ಕನ್ನಡ ಕಾವ್ಯ” ಕೃತಿಕರ್ತೃ ಮಹಾಕವಿ ಶ್ರೀವಿ ನರಹರಿಯವರೂ ಹಾಗೆಯೇ “ಭಗವಂತನ ಭಾವಗೀತೆ” ಕೃತಿಯ ಕವಿ ಅಷ್ಟಾವಧಾನಿ ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜರು ಆಗಮಿಸಿದ್ದರು. ಅಕಾಡೆಮಿಯ ವತಿಯಿಂದ ಇಬ್ಬರನ್ನೂ ಗೌರವಿಸಲಾಯಿತು.
ಗೀತೆಯಂತಹ ಅಧ್ಯಾತ್ಮ ಕಾವ್ಯವನ್ನು ಭಾವಗೀತಾತ್ಮಕವಾಗಿ ಸಂಯೋಜಿಸಿ ಪ್ರಸ್ತುತಪಡಿಸುವ ಕಾರ್ಯಕ್ರಮ ವಿನೂತನ ವಾದದ್ದು. ಇದು ಇಲ್ಲಿಗೇ ನಿಲ್ಲದೆ ಇನ್ನಷ್ಟು ವೇದಿಕೆಗಳಿಗೂ ಹರಡಬೇಕು. ಗೀತೆಯ ಪ್ರತಿ ಅಧ್ಯಾಯವನ್ನು ಕುರಿತು ದಶಕಗಳ ಕಾಲ ಉಪನ್ಯಾಸಗಳನ್ನು ನೀಡಿದರೂ ಮತ್ತೆ ಓದುವಾಗ ಹೊಸ ಹೊಳಹು ಬರುತ್ತದೆ. ಅದು ನಿತ್ಯನೂತನ ಎಂದು ಶ್ರೀ ನರಹರಿ ಹೇಳಿದರು.
ಛಂದಸ್ಸು ಎನ್ನುವುದು ಕಾವ್ಯವನ್ನು ಅಳೆಯುವ ಪ್ರಮಾಣ. ಕಳೆದ ಶತಮಾನದಿಂದ ವಿಫುಲವಾಗಿ ಸತ್ವಯುತವಾಗಿ ಕನ್ನಡದಲ್ಲಿ ಬೆಳೆದುಬಂದ ಭಾವಗೀತ ಪ್ರಕಾರ ಇಂದು ಸೊರಗಿದೆ. ಹೊಸ ಗೀತೆಗಳು ಹಾಡುಗರಿಗೆ ಬೇಕಾಗಿವೆ. ಅಂತೆಯೇ ಸಂಯೋಜಕರ ಮತ್ತು ಹಾಡುಗಾರರ ಜವಾಬ್ದಾರಿಯೂ ಹಿರಿದು. ಅವರಿಗೆ ಸಾಹಿತ್ಯದ ಒಂದಿಷ್ಟು ಅರಿವೂ. ಛಂದಸ್ಸಿನ ಪ್ರಾಥಮಿಕ ಜ್ಞಾನವೂ ಇರಬೇಕು.
ಇದು ರಾಗ. ಭಾವ, ತಾಳಗಳನ್ನು ನಿರ್ವಹಿಸಲು ಸಹಕಾರಿ. ಜತೆಗೆ ಕವಿಗೂ ಸಹ ಸಂಗೀತದ ಪ್ರಾಥಮಿಕ ಅಂಶಗಳು ತಿಳಿದಿರಬೇಕು. ಆಗ ಗೀತೆ ಪೂರ್ಣವಾಗುತ್ತದೆ ಎಂದು ಉದಾಹರಣೆಯ ಸಹಿತ ಸುಗಮ ಸಂಗೀತ ಹಾಡುಗಾರರಿಗೆ ಕಲಿಕೆಯ ಅಗತ್ಯವನ್ನು ತಿಳಿಸಿ, ಅಂತಹ ಯತ್ನಕ್ಕೆ ತಾವು ಬೆಂಬಲವಾಗಿ ಒದಗಿ ಬರುವ ಭರವಸೆಯನ್ನೂ ಕೊಟ್ಟರು.
ಅಕಾಡಮಿಯ ಅಧ್ಯಕ್ಷರೂ ಆದ ಎ.ಎಂ. ಚಂದ್ರಶೇಖರರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಶ್ರೀಮತಿ ವೀಣಾ ಅಶೋಕರವರು ಅತಿಥಿಯಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀಮತಿ ಶಂಕರಮ್ಮನವರ ಸ್ಮರಣೆಯಲ್ಲಿ ಅಕಾಡಮಿಯ ವಿಧ್ಯಾರ್ಥಿಗಳು ಸಂಪ್ರದಾಯದ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದ ಭಗವಂತನ ಭಾವಗೀತೆಗಳನ್ನು ಶ್ರೀಮತಿ/ಕುಮಾರಿಯರಾದ ಪ್ರತಿಭಾ ನಂದನ್, ಅಪರ್ಣಾ ಪ್ರಸನ್ನ, ಪ್ರಭಾ ಇನಾಂದಾರ್, ಕೆ ಪ್ರಣಮ್ಯ, ಸ್ಮೃತಿ ಶ್ರೀಕಂಠೇಶ್ವರ, ಪ್ರಮಥ ಪಿ ದೀಕ್ಷಿತ್, ಸುರಭಿ ಶ್ರೀಹರಿ, ಗಾಯತ್ರಿ ಕೇಶವ್ ಮತ್ತು ಅಕಾಡಮಿಯ ಹಿರಿಯ ವಿಧ್ಯಾರ್ಥಿಗಳು ಹಾಡಿದರು. ಇದಕ್ಕಾಗಿಯೇ ಗೀತೆಗಳಿಗೆ ಹೊಸದಾಗಿ ರಾಗಸಂಯೋಜಿಸಿ ಹಾಡಿಸಿದ್ದು ನೂತನವಾಗಿತ್ತು. ಪಕ್ಕವಾದ್ಯಗಳಲ್ಲಿ ಶ್ರೀಯುತರಾದ ಹರ್ಷ ಶಲವಾಡಿ, ಮೋಹನ್ ಹಾಗೂ ಶ್ಯಾಮದತ್ತ ರವರು ಸಹಕರಿಸಿದರು. ಕವಿ ಭ ರಾ ವಿಜಯಕುಮಾರರ ನಿರೂಪಣೆಯಲ್ಲಿ ಸಾಗಿಬಂದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಶ್ರೀ ಕೇಶವಮೂರ್ತಿಗಳು ಎಲ್ಲರಿಗೂ ವಂದಿಸಿದರು.
-ಕೇಶವಮೂರ್ತಿ