ಬೆಂಗಳೂರು: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳಮೀಸಲಾತಿಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಆದರೆ, ಪ್ರಸ್ತುತ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಗಳ ಒಳಮೀಸಲಾತಿಯ ಬಗ್ಗೆ ಮೌನವಹಿಸಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಗಾಗಿ ಆಯೋಗವನ್ನು ಸ್ಥಾಪಿಸಲು ಮುಂದಾಗಿರುವುದು, ದುರದೃಷ್ಟಕರ. ರಾಜ್ಯ ಸರಕಾರ ಕೂಡಲೇ ಪರಿಶಿಷ್ಟ ಪಂಗಡದವರಿಗೆ ಒಳಮೀಸಲಾತಿಗಾಗಿ ಆಯೋಗವನ್ನು ರಚಿಸಿ ಅದರಂತೆ ಕ್ರಮವಹಿಸಬೇಕು. ಅರಣ್ಯ ವಸಾಹತುಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಅಳಿವಿನ ಅಂಚಿನಲ್ಲಿರುವ ಮೂಲನಿವಾಸಿಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿ, ಈ ಸಮುದಾಯ ಮತ್ತು ಅವರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಖಾತ್ರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಹೆಚ್.ಡಿ.ಬಸವರಾಜು ಅವರು ಮುಖ್ಯಮಂತ್ರಿಯವರಿಗೆ ನೀಡಿದ ಮನವಿ ಪತ್ರದಲ್ಲಿ ಕೋರಿದ್ದಾರೆ.