ಆನೇಕಲ್: ಸರ್ವೋಚ್ಛ ನ್ಯಾಯಾಲಯದ ಪೀಠದ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣವನ್ನು ಈ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ರವರಿಗೆ ಮನವಿ ಪ್ರತ್ರ ನೀಡಿದರು.
ಈ ತಿಂಗಳ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿ ಕುರಿತು ತೀರ್ಮಾನ ಮಾಡಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯದಾದ್ಯಂತ ಪಾಲ್ಘೋಳುವ ಕಾರ್ಯಕ್ರಮಗಳಿಂದ ಫೇರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಎಚ್ಚರೊಕೆಯನ್ನು ರವಾನಿಸಿದರು.
ಮಾದಿಗ ಸಮಾಜದ ಹಿರಿಯ ಮುಖಂಡರಾದ ಎ.ಉದಯ್ ಕುಮಾರ್ ಮಾತನಾಡಿ, ಕಳೆದ ಆಗಸ್ಟ್ 1ರಂದು ಸವೋಚ್ಚ ನ್ಯಾಯಾಲಯದ ಏಳು ಸದಸ್ಯರ ಪೂರ್ಣ ಪೀಠವು ಎಸ್.ಸಿ ಮತ್ತು ಎಸ್.ಟಿ. ಮೀಸಲಾತಿಯಲ್ಲಿ ಒಳಮೀಸಲಾತಿ ಉಪವರ್ಗೀಕರಿಸಲು ಆಯಾ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ತೀರ್ಪು ನೀಡಿದೆ ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುತ್ತೇವೆ ಎಂದು 6ನೇ ಗ್ಯಾರಂಟಿಯಾಗಿ ಘೋಷಿಸಿಕೊಂಡಿದ್ದರು ಸಹ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ದೇಶದಾದ್ಯಂತ ಕಳೆದ ಮೂರು ದಶಕಗಳ ಕಾಲ ನಿರಂತರವಾಗಿ ಒಳ ಮಿಸಲಾತಿ ವರ್ಗಿಕರಣವಾಗಬೇಕೆಂದು ಹೋರಾಟಗಳು ನಡೆದಿರು ಸಹ ಇಲ್ಲಿಯವರೆಗು ಈ ಸಮುದಾಯದ ಕೂಗನ್ನು ಯಾರು ಈಡೇರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾದಿಗ ಸಮಾಜದ ಮುಖಂಡರಾದ ಸತ್ಯೇಂದ್ರ ಕುಮಾರ್, ಅತ್ತಿಬೆಲೆ ಪಿ. ನಾರಾಯಣಸ್ವಾಮಿ, ಎಂ. ಮೂರ್ತಿ ಕುಮಾರ್, ವಿ. ಶಿವಣ್ಣ, ವಿಜಯ್ ಶೇಖರ್, ರಾಜರತ್ನಂ, ಕೆ.ನಾರಾಯಣಸ್ವಾಮಿ, ಮಂಜುನಾಥ್, ಮುನಿರಾಜು, ಸುಲೋಚನಾ, ಮಣಿ, ಹೇಮಾಂತ್, ಹರೀಶ್, ಅಭಿಷೇಕ್, ವೆಂಕಟಸ್ವಾಮಿ, ಸುರೇಶ್, ಚೊಕ್ಕಸಂದ್ರ ವೇಣು, ಮರಸೂರು ನಾಗರಾಜು ಹಾಗೂ ಮತ್ತಿತ್ತರರು ಹಾಜರಿದ್ದರು.