ಬೆಂಗಳೂರು: ಹೆಣ್ಣೂರಿನ ಬಾಬಾಸಾಬ್ ಪಾಳ್ಯದಲ್ಲಿ ನಿನ್ನೆ ನಿರ್ಮಾಣ ಹಂತದ ಕಟ್ಟಡ ಕುಸಿದು ಅವಷೇಷಗಳಡಿ ಸಿಲುಕಿದ್ದವರ ಪೈಕಿ ಮೃತರ ಸಂಖ್ಯೆ ಐದಕ್ಕೇರಿದೆ.ಮೊಹಮ್ಮದ್ ಸಾಹಿಲ್, ತಿರುಪಾಲಿ, ಅರ್ಮಾನ್, ಶಂಕರ್, ಸತ್ಯರಾಜ್ ಮೃತಪಟ್ಟವರು.ರಾತ್ರಿ ಇಡೀ ಅವಶೇಷಗಳಡಿ ಸಿಲುಕಿದವರ ಪತ್ತೆ ಕಾರ್ಯ ನಡೆದಿದೆ. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕಾಮಗಾರಿಯ ವೇಳೆ 21 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈಗಾಗಲೇ ಅಗ್ನಿಶಾಮಕ, ಎನ್ಡಿಆರ್ಎಫ್, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ 13 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.ರಕ್ಷಣೆ ಮಾಡಿರುವ 6 ಮಂದಿ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಪರಿಸ್ಥಿತಿ ಚಿಂತಾಜನಕ ವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಹಲವು ಅವೇಶಷಗಳಡಿಯಲ್ಲಿ ಸಿಲುಕಿರುವ ಶಂಕೆ ಇದ್ದು, ಹ್ಯಾಮರ್, ಮೂರು ಜೆಸಿಬಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಇನ್ನು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಅಯಾಜ್ ಎಂಬಾತನನ್ನ ರಕ್ಷಣಾ ಸಿಬ್ಬಂದಿ ಜೀವಂತವಾಗಿ ರಕ್ಷಿಸಿದ್ದಾರೆ.ಗ್ರಿಲ್ಗಳಡಿ ಸಿಲುಕಿಕೊಂಡಿದ್ದ ಅಯಾಜ್ ನನ್ನ ಪತ್ತೆಹಚ್ಚಿದ ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟ್ಟರ್ ಬಳಸಿ ಗ್ರಿಲ್ ಕತ್ತರಿಸಿ ಹೊರಗೆ ಕರೆತಂದು,ತಕ್ಷಣವೇ ಆತನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಕಟ್ಟಡ ಮಾಲೀಕನ ವಿರುದ್ಧ ದೂರು
ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆಯಲ್ಲಿ ಕಟ್ಟಡ ಮಾಲೀಕ ಮುನಿರಾಜು ರೆಡ್ಡಿ ಹಾಗೂ ಆತನ ಮಗನ ವಿರುದ್ಧ ಎಫ್ಐಆರ್ ದಾಖಲಾಗಿದೆ.ಮುನಿರಾಜು ರೆಡ್ಡಿ ಆತನ ಮಗ, ಕಾಂಟ್ರ್ಯಾಕ್ಟರ್ ಸೇರಿ ಇತರರು ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಪ್ರಕರಣದಲ್ಲಿ ಒಟ್ಟು ಮೂರು ಜನರ ಹೆಸರನ್ನು ಪೊಲೀಸರು ಉಲ್ಲೇಖ ಮಾಡಿದ್ದು, ನಿರ್ಲಕ್ಷ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಕಳಪೆ ಕಾಮಗಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಕಟ್ಟಡ ನಿರ್ಮಾಣದಲ್ಲಿ ಪಿಲ್ಲರ್ ರಾಡ್ 28-30 ಎಂಎಂ ರಾಡ್ ಹಾಕಬೇಕಿತ್ತು ಆದರೆ 18-20 ಎಂಎಂ ರಾಡ್ ಬಳಸಿದ್ದಾರೆ. 14-16 ರಾಡ್ ಹಾಕಿ ಮೋಲ್ಡಿಂಗ್ ಮಾಡಬೇಕಿತ್ತು, ಆದರೆ 8-10 ಎಂಎಂ ರಾಡ್ ಬಳಸಿದ್ದಾರೆ. ಎಂ ಸ್ಯಾಂಡ್ ಹೆಚ್ಚು ಬಳಸಿ, ಸಿಮೆಂಟ್ ಕಡಿಮೆ ಬಳಸಿರುವ ಶಂಕೆ ವ್ಯಕ್ತವಾಗಿದೆ.