ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.
ಇತ್ತೀಚೆಗೆ ನಡೆದ ‘ಗುಂಮ್ಟಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ, ಟ್ರೇಲರ್ ಬಗ್ಗೆ ಮತ್ತು ‘ಗುಂಮ್ಟಿ’ ಚಿತ್ರದ ಕಥಾಹಂದರ ಮತ್ತಿತರ ವಿಷಯಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿತು.’ಗುಂಮ್ಟಿ’ ಸಿನೆಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ, ‘ಬಾಲ್ಯದಿಂದಲೂ ನಮ್ಮ ಸುತ್ತಮುತ್ತ ಕಂಡ ಜಾನಪದ ಕಲೆಯೊಂದನ್ನು ಈ ಸಿನೆಮಾದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ಎಲ್ಲರಿಗೂ ಈ ಸಿನೆಮಾದ ಕಥಾಹಂದರ ಇಷ್ಟವಾಗಲಿದೆ, ಮನಮುಟ್ಟುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.
‘ಗುಂಮ್ಟಿ’ಯ ಬಗ್ಗೆ ಮಾತಿಗಿಳಿದ ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ‘ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆ?. ‘ಗುಂಮ್ಟಿ’ ಎಂಬುದು ಕುಡುಬಿ ಸಮುದಾಯಕ ಕಲಾಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂದು ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.