ಉದಯೋನ್ಮುಖ ಬಾಲಪ್ರತಿಭೆಗಳಾದ ಕು. ತನ್ವಿ ರಾವ್, ಪೂರ್ವಿ ಸರ್ವೇಶ್ ಮತ್ತು ಸಿಂಧೂರ ರಾವ್ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿದ್ಯುಕ್ತ `ಗೆಜ್ಜೆನಮನ’ ನೃತ್ಯಪ್ರದರ್ಶನದಲ್ಲಿ ನಗುಮುಖದಿಂದ- ಅಂಗಶುದ್ಧವಾದ ಸುಂದರ ನರ್ತನವನ್ನು ಪ್ರಸ್ತುತಪಡಿಸಿ ನೆರೆದ ಕಲಾಭಿಮಾನಿಗಳ ತುಂಬು ಮೆಚ್ಚುಗೆಯನ್ನು ಪಡೆದರು. ನಗರದ `ಶಿವಾನುಗ್ರಹ ಲಲಿತಕಲಾ ಟ್ರಸ್ಟ್’ನ ನಾಟ್ಯಗುರು ವಿದುಷಿ ಲತಾ ರಮೇಶ್ ಅವರ ಶಿಷ್ಯರಾದ ಕನ್ಯಾತ್ರಯರು ಬದ್ಧತೆಯಿಂದ ಕಲಿತು ಗುರುಗಳ ಮಾರ್ಗದರ್ಶನದಲ್ಲಿ ಅಭ್ಯಸಿಸಿದ ಕೃತಿಗಳನ್ನು ಬಹು ಒಪ್ಪವಾಗಿ ಅರ್ಪಿಸಿದರು.
ಹೆಚ್ಚೂ ಕಡಿಮೆ ಮೂವರು ನರ್ತಕಿಯರು ಎಂದೇ ಎರಕದಲ್ಲಿ ಹುಯ್ದ ಹದವಾದ ಮೈಕಟ್ಟಿನ ಪುತ್ಥಲಿಗಳಂತಿದ್ದರು. ಶುಭಾರಂಭಕ್ಕೆ ಸರಸ್ವತಿ ರಾಗ-ಆದಿತಾಳದ ಮಧುರೈ ಮುರಳೀಧರನ್ ರಚಿಸಿದ `ಪುಷ್ಪಾಂಜಲಿ’ಯನ್ನು ತಮ್ಮ ತಾಳಬದ್ಧ ಲಯಾತ್ಮಕ ಹೆಜ್ಜೆಗಳಿಂದ, ಸಾಮರಸ್ಯವಾಗಿ ಆಂಗಿಕಾಭಿನಯವನ್ನು ಸಾದರಪಡಿಸಿದರು. ಲವಲವಿಕೆಯಿದ ನರ್ತಿಸಿದ ನರ್ತಕಿಯರ ಕಣ್ಣಿನ ಚಲನೆಗಳು, ಕಲಾತ್ಮಕ ನೃತ್ತವಿನ್ಯಾಸಗಳನ್ನು ಸಾಕಾರಗೊಳಿಸಿದ ಪರಿ ಮುದನೀಡಿತು. `ಗಣೇಶ ಕೌತ್ವಂ’ -ಕೃತಿ (ರಚನೆ- ಪ್ರಸನ್ನಕುಮಾರ್) ಯಲ್ಲಿ ವಿಘ್ನನಿವಾರಕ ವಿನಾಯಕನ ವಿವಿಧ ರೂಪಗಳನ್ನು ಕಟ್ಟಿಕೊಡುವಲ್ಲಿ ಮೂಷಿಕದ ಜಿಗಿದಾಟ- ಚಲನೆಗಳು, ಗಣಪನ ಭಂಗಿಗಳು ಇತ್ಯಾದಿ ನಾಟಕೀಯ ಆಯಾಮಗಳಿಂದ ವಿಶೇಷತೆಯನ್ನು ಮೆರೆದವು.
`ಅಲರಿಪು’ವಿನಲ್ಲಿ ಮೂಡಿಬಂದ ನೃತ್ತಗಳು ಅಚ್ಚುಕಟ್ಟಾಗಿದ್ದು, ಗುರು ಲತಾರ ಸುಶ್ರಾವ್ಯ -ಲಯಬದ್ಧ ನಟುವಾಂಗ ಸಶಕ್ತವಾಗಿತ್ತು. ಪ್ರಸ್ತುತಿಯ ಪ್ರಮುಖ ಘಟ್ಟ- ಸಂಕೀರ್ಣ ಜತಿಗಳಿಂದ ಕೂಡಿದ ಪ್ರಬುದ್ಧ ನೃತ್ತಬಂಧ. ಮೈಸೂರು ಸದಾಶಿವರಾಯರು ರಚಿಸಿದ ನಾಯಕಿಯ ವಿರಹಭಾವನೆಯನ್ನು ಕಟ್ಟಿಕೊಡುವ, ತೀವ್ರಭಾವಾಲಾಪದ ಭಾವಪೂರ್ಣ `ವರ್ಣ’ದ ಕೃತಿಯನ್ನು ಮೂವರು ಕಲಾವಿದೆಯರು ತಮ್ಮ ಸುಂದರಾಭಿನಯದಿಂದ ಸಾಕ್ಷಾತ್ಕರಿಸಿದರು.
ನಾಯಕಿಯ ಮನದ ಅಳಲು- ನೋವು ವಿಧ ವಿಧವಾದ ಆಂಗಿಕಾಭಿನಯದ ಅಭಿವ್ಯಕ್ತಿ, ಗತ ಶೃಂಗಾರ ಸಂಚಾರಿ ಸನ್ನಿವೇಶಗಳ ಚಿತ್ರಣದಲ್ಲಿ ಗಾಢವಾಗಿ ಬಿಂಬಿತವಾದವು. ತನ್ನ ಪ್ರೀತಿಯ ಉಪಚಾರವನ್ನು ನಿರ್ಲಕ್ಷಿಸುವ, ತನ್ನನ್ನು ತಿರಸ್ಕರಿಸುತ್ತಿರುವ ತನ್ನಿನಿಯನ ಬದಲಾವಣೆಯಾದ ನಡವಳಿಕೆಗೆ ಕಾರಣವೇನೆಂದು ಪರಿಪರಿಯಾಗಿ ಹಲಬುತ್ತಾಳೆ. ಪರಸ್ತ್ರೀ ಮೋಹಿತನಾದ ಅವನು ಅವಳ ಚಾಡಿ ಮಾತುಗಳಿಗೆ ಕಿವಿಯಾಗಿ ತನ್ನ ಪವಿತ್ರ ಪ್ರೇಮವನ್ನು ಅರಿಯದಾದನೇ ಎಂದು ನಾಯಕಿ ವಿರಹದ ನೋವಿನ ಉರಿಯಲ್ಲಿ ಬೆಂದು ಬಸವಳಿಯುವ ಹೃದಯಂಗಮ ಚಿತ್ರಣವನ್ನು ಕಲಾವಿದೆಯರು ಕಟ್ಟಿ ಕೊಟ್ಟದ್ದು ಪರಿಣಾಮಕಾರಿಯಾಗಿತ್ತು. ನಡುನಡುವೆ ನಾಯಕಿಯ ನೋವಿಗೆ ದನಿ ಮಿಡಿಯುವಂತೆ, ಅವಳ ಒಳಗಿನ ಬೇಗುದಿಯ ತೀವ್ರ ಅಭಿವ್ಯಕ್ತಿಯಂತೆ ಪ್ರಸ್ತುತಪಡಿಸುವ ನೃತ್ತಗಳ ಜ್ಹೆಂಕಾರಕ್ಕೆ ಗುರು ಲತಾರ ಸ್ಫುಟವಾದ ನಟುವಾಂಗದ ನಿರ್ಝರಿ ಕಲಾವಿದೆಯರ ಅಸ್ಖಲಿತ ನರ್ತನದ ಕಸುವಿಗೆ ಇಂಬು ನೀಡಿತ್ತು.
ಪ್ರದರ್ಶನದ ಉತ್ತರಾರ್ಧದಲ್ಲಿ ಸಾಮಾನ್ಯವಾಗಿ ಕಲಾವಿದರು ಮೈಚಳಿ ಬಿಟ್ಟು ನರ್ತಿಸುವರು. ಮೊದಲರ್ಧದ `ಮಾರ್ಗಂ’ ಸಂಪ್ರದಾಯದಲ್ಲಿ ಪಾರಂಪರಿಕ ಕೃತಿಗಳನ್ನು ಶಾಸ್ತ್ರೀಯ ಚೌಕಟ್ಟಿನೊಳಗೆ ನರ್ತಿಸುವಾಗ ಸಹಜವಾದ ಭಯ-ಭಕ್ತಿ ಭಾವನೆಗಳು ಮೇಲುಗೈ ಆಗಿರುತ್ತವೆ. `ಭೋ ಶಂಭೋ ಶಿವ ಶಂಭೋ ಸ್ವಯಂಭೋ’- ದಯಾನಂದ ಸರಸ್ವತಿ ರಚನೆಯ ರೇವತಿ ರಾಗ- ಅದಿತಾಳದ ಕೃತಿಯನ್ನು ಪೂರ್ವೀ ಮನೋಜ್ಞವಾಗಿ ನಿರೂಪಿಸಿದಳು. ಅವಳ ಪ್ರತಿಯೊಂದು ಆಂಗಿಕಾಭಿನಯ, ಮಂಡಿ ಅಡವು, ಆಕಾಶಚಾರಿ, ಯೋಗಭಂಗಿಗಳು ಆಕರ್ಷಕವಾಗಿದ್ದು, ಬೇಡರ ಕಣ್ಣಪ್ಪನ ಶಿವಾರಾಧನೆಯ ಸಂಚಾರಿ ಕಥಾನಕ ಪರಿಣಾಮಕಾರಿಯಾಗಿತ್ತು.
ನಂತರ- ಸಿಂಧೂರರಾವ್ ಸಾಕ್ಷಾತ್ಕರಿಸಿದ `ಹನುಮಂತ ದೇವ ನಮೋ’-ಶ್ರೀ ಪುರಂದರದಾಸರ ಕೃತಿ ಶಕ್ತಿಶಾಲಿಯಾಗಿ ಮೂಡಿಬಂತು. ಅಶೋಕವನದಲ್ಲಿ ಸೀತಾಮಾತೆಯನ್ನು ಕಂಡು ಶ್ರೀರಾಮನ ಮುದ್ರೆಯುಂಗರವನ್ನು ನೀಡುವ ದೃಶ್ಯದಲ್ಲಿ, ಸ್ವಲ್ಪ ಕಪಿಚೇಷ್ಟೆಯ ನಗೆಹನಿಯೊಂದಿಗೆ ಸಾಗಿ ರಾವಣನ ಮುಂದೆ ಬಾಲಸುತ್ತಿ ಸಿಂಹಾಸನ ಮಾಡಿಕೊಂಡು ಸ್ವಾಭಿಮಾನ ಮೆರೆದ ವೀರ ಹನುಮಾನನ ವಿಶಿಷ್ಟ ವ್ಯಕ್ತಿತ್ವವನ್ನು ಕಲಾವಿದೆ ಬಹು ಸೊಗಸಾಗಿ, ಲವಲವಿಕೆಯಿಂದ ಅಭಿವ್ಯಕ್ತಿಸಿದಳು. ಮುಂದೆ ಮೂರುಕಲಾವಿದೆಯರು ವಿವಿಧ ಪಾತ್ರಗಳ ಒಳಹೊಕ್ಕು ಅಭಿನಯಿಸಿದ `ಆಡಿದನೋ ರಂಗ’ ಶ್ರೀಕೃಷ್ಣನ ಲೀಲಾವಿನೋದ- ಸಾಹಸವನ್ನು ಕಣ್ಮನ ಸೆಳೆಯುವಂತೆ ಅಭಿನಯಿಸಿದರು.
ತುಳುನಾಡಿನ ಹೆಮ್ಮೆಯ ದೈವ `ಕೊರಗಜ್ಜನ ಕಥೆ’ಯನ್ನು ತನ್ವೀ ರಾವ್ ಬಹು ವಿಶಿಷ್ಟ ಬಗೆಯಲ್ಲಿ, ಆತನ ವಿಶೇಷತೆ- ಮಹಿಮೆಗಳನ್ನು ಸ್ತುತಿಸುವ ನೃತ್ಯರೂಪಕದಂತಿದ್ದ ಸ್ತುತಿಗೀತೆ ಕುತೂಹಲ ಕೆರಳಿಸುತ್ತ ಸಾಗಿತು. ಸಾಮಾಜಿಕವಾಗಿ, ಕನಿಷ್ಠ ರೀತಿಯಲ್ಲಿ ಕಾಣಲಾಗುತ್ತಿದ್ದ ಐತಿಹಾಸಿಕ ವ್ಯಕ್ತಿ , ಶಕ್ತಿಯಾಗಿ ಬೆಳೆದ ಕೊರಗ ತನಿಯನ ಕಥಾನಕವನ್ನು ಅನೇಕ ಪರಿಕರಗಳ ಸಹಾಯದಿಂದ ನಿರೂಪಿಸಿದಳು ತನ್ವೀರಾವ್. ಕೊರಗಜ್ಜನ ಮೂರ್ತಿಯ ಎದುರಲ್ಲಿ ಅರ್ಪಿಸಿದ ನೃತ್ಯ, ಜಾನಪದ ಧಾಟಿಯಲ್ಲಿ ಸ್ವಾರಸ್ಯವಾಗಿ ತೆರೆದುಕೊಳ್ಳುತ್ತ ನೋಡುಗರಲ್ಲಿ ರೋಮಾಂಚವನ್ನು ಉಂಟುಮಾಡಿತು. ಕೊನೆಯಲ್ಲಿ ಆಕರ್ಷಕ ಕೊನ್ನಕೊಲ್ಗಳ ಲಯದಲ್ಲಿ, ಮಿಂಚಿನಸಂಚಾರದ ನೃತ್ತನೈವೇದ್ಯದ `ತಿಲ್ಲಾನ’ದ ನಂತರ ದಶಾವತಾರವನ್ನು ಚಿತ್ರಿಸಿದ `ಮಂಗಳ’ದೊಂದಿಗೆ ನೃತ್ಯಪ್ರಸ್ತುತಿ ಸಂಪನ್ನಗೊಂಡಿತು.
ನೃತ್ಯವನ್ನು ಚೆಂದಗಾಣಿಸಿದ ವಾದ್ಯವೃಂದದ ಸಹಕಾರದಲ್ಲಿ ಗಾಯನ- ವಿ.ರೋಹಿಣಿ ಎಂ.ವಿ. ಮತ್ತು ರೋಹಿಣಿ ಚಿದಂಬರನ್, ಮೃದಂಗ- ವಿ. ಜಿ.ಎಸ್. ನಾಗರಾಜ್, ಕೊಳಲು- ವಿ. ಸ್ಕಂಧಕುಮಾರ್ ಮತ್ತು ರಿದಂಪ್ಯಾಡ್- ಅರುಣ್ ಕುಮಾರ್, ಅಸ್ಖಲಿತ ನಟುವಾಂಗದಲ್ಲಿ ಗುರು ಲತಾ ರಮೇಶ್ ಅವರ ಕಾರ್ಯಕ್ಷಮತೆ ಸ್ತುತ್ಯಾರ್ಹವಾಗಿತ್ತು.