ಬೆಂಗಳೂರು ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಷ್ಟಿಸಿದ ಮಹನೀಯರು ಮ. ರಾಮಮೂರ್ತಿ. ಅವರು ಕನ್ನಡ ಬಾವುಟವನ್ನು ಮಾತ್ರ ರೂಪಿಸಲಿಲ್ಲ ಅದನ್ನು ಎತ್ತಿ ಹಿಡಿದು ಕನ್ನಡಿಗರು ಗೌರವದಿಂದ ಬಾಳುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು.ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಮ.ರಾಮಮೂರ್ತಿಯವರ 108ನೆಯ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
1960ರ ದಶಕದಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಈ ಹೋರಾಟದ ಮುಂಚೂಣಿಯಲ್ಲಿದ್ದವರು ಮ.ರಾಮಮೂರ್ತಿ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಇತಿಹಾಸವನ್ನು ಸ್ಮರಿಸಿ ಕೊಂಡರು. ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮೇರು ಬರಹಗಾರ ದೇವುಡು ನರಸಿಂಹ ಶಾಸ್ತ್ರಿಗಳು ಬಾಲಕ ರಾಮಮೂರ್ತಿಯವರಲ್ಲಿ ಕನ್ನಡ ಪ್ರೇಮವನ್ನು ಬಿತ್ತಿದರು. ಇದರಿಂದ ಪ್ರೇರಿತರಾಗಿ ಮ ರಾಮಮೂರ್ತಿಯವರು ಬರೆದ ಮೊದಲ ಕಥೆ `ಗುರುದಕ್ಷಿಣಿ’. ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಯವರ ಜೊತೆಗೆ ಕೈಜೋಡಿಸಿದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.
ವೀರಕೇಸರಿ ಪತ್ರಿಕೆಯು ಕಾರಣಾಂತರದಿಂದ ಪ್ರಕಟಣೆಯನ್ನು ನಿಲ್ಲಿಸಿದ್ದರಿಂದ ರಾಮಮೂರ್ತಿಯವರೇ `ವಿನೋದಿನಿ’, `ಕಥಾವಾಣಿ’, `ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು. ಸ್ವಾತಂತ್ರ್ಯ ಪೂರ್ವದ ಬಿಗಿ ನೀತಿಯಿಂದಾಗಿ ಕಾನೂನಿನಿಂದ ಕೋರ್ಟು ಮೆಟ್ಟಿಲು ಹತ್ತಬೇಕಾಗಿಬಂದರೂ ಧೈರ್ಯಗೆಡದೆ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿ ಗೆದ್ದು ಬಂದರು.ಬೆಂಗಳೂರಿನಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು, `ಕನ್ನಡ ಸಂಯುಕ್ತರಂಗ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದಾಗ ಮ ರಾಮಮೂರ್ತಿಯವರು ಕಾರ್ಯದರ್ಶಿಗಳಾಗಿ ಜವಾಬ್ಧಾರಿ ಹೊತ್ತರು. ಇದರ ಮುಖವಾಣಿಯಾಗಿ `ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಿದರು ಎಂಬುದನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಮ.ರಾಮೂರ್ತಿಯವರ ದುರಂತ ಸಾವನ್ನು ನೆನಪು ಮಾಡಿಕೊಂಡು ಕನ್ನಡಕ್ಕೆ ತನ್ನ ಸರ್ವಸ್ವವನ್ನು ಸಮರ್ಪಣೆ ಮಾಡಿದ ಮ.ರಾಮಮೂರ್ತಿಯವರ ಮಡದಿ ಕಮಲಮ್ಮನವರು ವೃದ್ದಾಪ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅವರ ಚಿಕಿತ್ಸೆಗೆ ಧನ ಸಹಾಯ ಮಾಡಿರುವುದು ಮಾತ್ರವಲ್ಲದೆ ಅವರ ಕುರಿತು ವೈಯಕ್ತಿಕ ಕಾಳಜಿಯನ್ನೂ ಕೂಡ ವಹಿಸಿದೆ ಎಂದು ತಿಳಿಸಿದರು.
1950-60ರ ದಶಕದಲ್ಲಿ ಅವರು ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದ್ದರು ಎಂದು ನೆನಪು ಮಾಡಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು ಮುಂತಾಗಿ ಅವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಸಂಖ್ಯೆ 150ಕ್ಕೂ ಹೆಚ್ಚು. ಈ ಪತ್ತೇದಾರಿ ಕಾದಂಬರಿಗಳ ಜೊತೆಗೆ ಅವರು ಹಲವಾರು ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದು `ಭಾಗ್ಯದ ಮದುವೆ, `ಪ್ರೇಮಮಂದಿರ’ ಮಹತ್ವವಾದವು. ಇವಲ್ಲದೆ `ಹಿಪ್ಪರಗಿ’ ಸೀಮೆ ಮತ್ತು `ಇಬ್ಬರು ರಾಣಿಯರು’ ಮುಂತಾದ ಕಾದಂಬರಿಗಳು ವಿಪುಲವಾದ ಚಾರಿತ್ರಿಕ ವರ್ಣನೆಗಳಿಂದ ಕೂಡಿದ್ದರೆ, ಶಿವಮೊಗ್ಗ ಜಿಲ್ಲೆಯ `ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತ `ರಾಜದಂಡ’ ಚಾರಿತ್ರಿಕವಾಗಿ ಅದ್ವಿತೀಯ ಕಾದಂಬರಿ ಎನಿಸಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಎನ್.ಎಸ್.ಶ್ರೀಧರ ಮೂರ್ತಿ ಮತ್ತು ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.