ಕನ್ನಡ ಉತ್ಸವಗಳನ್ನು ನಡೆಸುವ ಉತ್ಸಾಹಿಗಳು ಕನ್ನಡವನ್ನು ಸ್ಥಾಪಿಸುವ ಕಡೆ ಯುಕ್ತ ಗಮನ ನೀಡಬೇಕು. ಕನ್ನಡವನ್ನು ಸ್ಥಾಪಿಸುವುದೆಂದರೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ನಮ್ಮಕುಲ ಮತ್ತು ಕನ್ನಡವೇ ನಮ್ಮ ತತ್ವ ಎನ್ನುವಷ್ಟರ ಮಟ್ಟಿಗೆ ಆಚರಣೆಗೆ ತರಬೇಕು. ಕೇವಲ ಘೋಷಣೆಗಳಿಂದ ಕನ್ನಡ ಭಾಷೆಯ ಏಳಿಗೆ ಅಸಾಧ್ಯ.
ಕನ್ನಡವನ್ನು ಕಾಪಾಡುವ ಕಾರ್ಯ ಯಾವುದೋ ಚಳವಳಿದಾರರಿಗೆ, ಪರಿಷತ್ತುಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಬಿಟ್ಟಿದ್ದು ಎನ್ನದೆ ಪ್ರತಿಯೊಬ್ಬರೂ ತಮ್ಮ ಪಾಲಿನ ಹೊಣೆ ಎಂದು ಅರಿತು ನಿರ್ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಅಭಿಪ್ರಾಯಪಟ್ಟರು.
ಮಹೇಶ್ ಜೋಶಿಯವರು ಚಿರಂತನ ಅಭಿವೃದ್ಧಿ ಪ್ರತಿಷ್ಠಾನದವರು ಆಯೋಜಿಸಿದ್ದ ನಾಡು-ನುಡಿ-ನಿತ್ಯೋತ್ಸವ ಸಮಾರಂಭದಲ್ಲಿ ಶ್ರೀ ರಮೇಶ ಕುಮಾರ್ ಬನ್ನೂರು ವಿರಚಿತ `ಕುಮಾರ ಸಂಭವ’ ಕನ್ನಡ ಅವತರಣಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಶ್ರೀ ರಮೇಶ್ ಕುಮಾರ್ ಬನ್ನೂರು ಅವರು ಕನ್ನಡಕ್ಕೆ ತಂದಿರುವ `ಕುಮಾರ ಸಂಭವ’ ಒಂದು ವಿಶಿಷ್ಠವಾದ ಮತ್ತು ಸಂಗ್ರಹಾಯೋಗ್ಯ ಕೃತಿ.
ಕಾಳಿದಾಸ ವಿರಚಿತ ಮೂಲ ಮಹಾಕಾವ್ಯದ ಭಾವವನ್ನು ಅನುಸರಿಸಿ ಆಯ್ದ ಪದ್ಯಗಳ ರೂಪದಲ್ಲಿ ಪ್ರಸ್ತುತ ಪಡಿಸಿರುವ ಕ್ರಮ ವಿಶಿಷ್ಠವಾಗಿದೆ ಎಂದರು.
ಸಂಸ್ಕೃತ ವಿದ್ವಾಂಸರಾದ ಶ್ರೀ ಗಣಪತಿ ಹೆಗ್ಗಡೆಯವರು ಮಾತನಾಡಿ `ಪುಸ್ತಕಗಳು ಅಟ್ಟದ ಸಾಹಿತ್ಯವಾಗಬಾರದು. ಪ್ರತಿ ಮನೆಯಲ್ಲೂ ಇರಬೇಕಾದ ಜ್ಞಾನದ ಧಾರೆಯ ಪುಸ್ತಕವಿದು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಘವೇಂದ್ರ ವಿ ಕೊಳ್ಳೇಗಾಲ್, ಕೆನರಾ ಬ್ಯಾಂಕ್ ನ ನಿವೃತ್ತ ಮಹಾಪ್ರಬಂಧಕರಾದ ಶ್ರೀ ಡಿ ಕಲ್ಲೂರಾವ್ ಮತ್ತು ಕೃತಿಯ ಲೇಖಕರಾದ ಶ್ರೀ ರಮೇಶ್ ಕುಮಾರ್ ಬನ್ನೂರು ರವರು ಕೃತಿಯ ಕುರಿತು ಮಾತನಾಡಿದ್ದರು. ಶ್ರೀ ವೆಂಕಟೇಶ ಶೇಷಾದ್ರಿಯವರು ಸ್ವಾಗತಿಸಿದರು. ಶ್ರೀ ಕೆ ಜಿ ಸಂಪತ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಮುರಳೀಕೃಷ್ಣ ಬೇಳಾಲು ರವರು ವಂದಿಸಿದರು.
ಈ ಸಂದರ್ಭದಲ್ಲಿ ನಾಲ್ಕು ಸಾಧಕರಿಗೆ `ಕರುನಾಡ ಸಾಧಕರತ್ನ’ ಪ್ರಶಸ್ತಿಯನ್ನುನೀಡಿ ಪುರಸ್ಕರಿಸಲಾಯಿತು. ಡಾ ಅಶ್ವಿನಿ ಭಟ್ (ಕ್ಷೇತ್ರ: ಕಲೆ ಮತ್ತು ಸಂಸ್ಕೃತಿ), ಶ್ರೀ ಶ್ರೀಕಾಂತ ಪತ್ರೇಮರ (ಕ್ಷೇತ್ರ : ಸಾಹಿತ್ಯ ಮತ್ತು ಸಂಘಟನೆ), ಶ್ರೀಮತಿ ಆಶಾ ರಮೇಶ್ (ಕ್ಷೇತ್ರ: ಭಾರತೀಯ ಸಂಸ್ಕೃತಿ) ಮತ್ತು ಶ್ರೀ ವಿಪಿನ್ ಬದೋರಿಯಾ (ಕ್ಷೇತ್ರ : ಶಿಲ್ಪಕಲೆ) ರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ನಾಡು-ನುಡಿ-ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಗಾಯಕ-ಗಾಯಕಿಯರಾದ ಶ್ರೀಮತಿ ಸುಮಾ ಶಾಸ್ತ್ರಿ, ಶ್ರೀ ವೀರೇಶ್ ಎಂಪಿಎಂ, ಶ್ರೀಮತಿ ಅನಿತಾ ಮುತ್ತು ಕುಮಾರ್ ಮತ್ತು ವಿದ್ವಾನ್ ವಿಶ್ವೇಶ್ ಭಟ್ ರವರು ಭಾವಗೀತೆಗಳನ್ನು ಹಾಡಿದರು.